ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿಯೇ ಮರೆತು ಬಿಟ್ಟ ಏರ್ಪೋಡ್ಸ್ ಒಂದನ್ನು ಆಟೋ ಚಾಲಕ ತಲುಪಿಸುವ ಮೂಲಕ ಶ್ಲಾಘನಾರ್ಹ ಕಾರ್ಯ ಮಾಡಿದ್ದಾರೆ. ಶಿದಿಕಾ ಎಂಬ ಮಹಿಳೆ ಈ ಬಗ್ಗೆ ಜಾಲತಾಣದಲ್ಲಿ ಈ ವಿಷಯ ತಿಳಿಸಿದ್ದಾರೆ.
ಶಿದಿಕಾ ಎಂದಿನಂತೆ ನೌಕರಿಗೆ ಹೋಗಲು ಆಟೋ ಏರಿದ್ದಾರೆ. ಗಡಿಬಿಡಿಯಲ್ಲಿ ತಮ್ಮ ಏರ್ಪಾಡ್ಸ್ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ಇದನ್ನು ಗಮನಿಸಿದ ಚಾಲಕ, ಏರ್ಪಾಡ್ಸ್ ಲಭ್ಯವಾಗುತ್ತಿದ್ದಂತೆ ಫೋನ್ಪೇ ಮೂಲಕ ಶಿದಿಕಾ ಅವರ ನಂಬರ್ ಪತ್ತೆ ಹಚ್ಚಿ ಅವರ ಕಚೇರಿಯ ವಿಳಾಸವನ್ನು ಪಡೆದುಕೊಂಡಿದ್ದಾರೆ.
ದುಬಾರಿ ಬೆಲೆಯ ಈ ಏರ್ಪಾಡ್ ಅನ್ನು ಶಿದಿಕಾ ಅವರಿಗೆ ಅರ್ಧಗಂಟೆಯೊಳಗೆ ತಲುಪಿಸಿದಾಗ ಆಕೆ ಅಚ್ಚರಿಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ‘ಆಟೋದಲ್ಲಿ ನಾನು ನನ್ನ ಏರ್ಪಾಡ್ಸ್ ಕಳೆದುಕೊಂಡೆ. ಆದರೆ ಆಟೋ ಚಾಲಕ ಫೋನ್ಪೇ ಮೂಲಕ ನನ್ನ ನಂಬರ್ ಹುಡುಕಿ ಅರ್ಧ ಗಂಟೆಯಲ್ಲಿ ನನ್ನ ಕಚೇರಿಗೆ ಬಂದು ಸೆಕ್ಯೂರಿಟಿಯ ಬಳಿ ಏರ್ಪಾಡ್ ತಲುಪಿಸಿ ಹೋಗಿದ್ದಾರೆ.’ ಎಂದು ಹೇಳಿದ್ದಾರೆ.