ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಳಕು ಸ್ಥಳೀಯರಲ್ಲಿ ಆತಂಕ ತಂದ ಘಟನೆ ನಡೆದಿದೆ.
ಮನೆಯ ಮಾಲೀಕ ಹಲ್ಲೆಗೆರೆ ಶಂಕರ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಕಳೆದ ವರ್ಷ ನಡೆದ ಪ್ರಕರಣದ ನಂತರ ಆಂಧ್ರಹಳ್ಳಿಯಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಹಲ್ಲೆಗೆರೆ ಶಂಕರ್ ಅವರ ಮನೆ ಖಾಲಿ ಬಿದ್ದಿದೆ. ಈ ಮನೆಯಲ್ಲಿ ದೆವ್ವ, ಭೂತಗಳಿವೆ ಎಂದು ಸ್ಥಳೀಯರು ಕತೆಕಟ್ಟಿ ಅಮಾವಾಸ್ಯೆ ದಿನ ಈ ರಸ್ತೆಯಲ್ಲಿ ಓಡಾಡಲು ಭಯಪಡುತ್ತಾರೆ ಎನ್ನಲಾಗಿದೆ.
ಅಮಾವಾಸ್ಯೆಯ ಮಾರನೇ ದಿನ ಮಧ್ಯರಾತ್ರಿ ಹಲ್ಲೆಗೆರೆ ಶಂಕರ್ ಅವರ ಬಂಗಲೆಯಲ್ಲಿ ಬೆಳಕು ಕಾಣಿಸಿಕೊಂಡಿದೆ. ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ, ಬೆಳಕು ಕಂಡು ಸ್ಥಳೀಯರು ಗಾಬರಿಯಾಗಿ ಶಂಕರ್ ಅವರ ಸಂಬಂಧಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ ಮೂರ್ನಾಲ್ಕು ಮಂದಿ ಮನೆಯೊಳಗೆ ಹುಡುಕಾಟ ನಡೆಸಿದಾಗ ದೇವರ ಮನೆ ಬಳಿಯಿಂದ ದೆವ್ವ ದೆವ್ವ ಎಂದು ಕಿರುಚಾಡುತ್ತಾ ವ್ಯಕ್ತಿಯೊಬ್ಬ ಹೊರಗೆ ಬಂದಿದ್ದಾನೆ. ಗಾಬರಿಯಾದ ಮೂರ್ನಾಲ್ಕು ಮಂದಿ ದೂರ ಸರಿದಿದ್ದಾರೆ. ಕೊನೆಗೆ ಕೂಗಾಡಿದವನನ್ನು ವಿಚಾರಿಸಿದಾಗ ಮನೆಯಲ್ಲಿ ಕಳ್ಳತನಕ್ಕೆ ಬಂದಿರುವ ಕಳ್ಳ ಎನ್ನುವುದು ಗೊತ್ತಾಗಿದೆ.
ಕಳ್ಳತನಕ್ಕೆ ಬಂದಿದ್ದ ಭರತ್ ಕುಮಾರ್, ಮೊಬೈಲ್ ಟಾರ್ಚ್ ಬೆಳಕಲ್ಲಿ ಮನೆಯಲ್ಲಿ ಹುಡುಕಾಡುತ್ತಿದ್ದಾಗಲೇ ಜನ ಬಂದಿದ್ದರಿಂದ ದೆವ್ವ ದೆವ್ವ ಎಂದು ಕೂಗಾಡಿ ಪರಾರಿಯಾಗಲೆತ್ನಿಸಿದ್ದಾನೆ. ಆತನನ್ನು ಹಿಡಿದು ಥಳಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.