ಕೇವಲ ಐದೇ ನಿಮಿಷದಲ್ಲಿ ಕೀ ಇಲ್ಲದೇ ಮೋಟಾರ್ ಸೈಕಲ್ ಗಳನ್ನು ಅನ್ ಲಾಕ್ ಮಾಡ್ತಿದ್ದ 15 ವರ್ಷದ ಬಾಲಕನನ್ನ ಮುಂಬೈನ ಟ್ರಾಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವಿ ಮುಂಬೈನ ವಾಶಿ, ಗೋವಂಡಿ ಮತ್ತು ಮನ್‌ಖುರ್ದ್‌ನಿಂದ ಎಂಟು ವಾಹನಗಳನ್ನು ಆತ ಇಬ್ಬರು ವಯಸ್ಕ ಸಹಚರರೊಂದಿಗೆ ಕದ್ದಿದ್ದ. ಇದರಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಪ್ರಕರಣಗಳ ವಿಚಾರಣೆ ಬಳಿಕ ಬಾಲಕನನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಬಂಧಿತ ಶಂಕಿತ ಆರೋಪಿ ಚೀತಾ ಕ್ಯಾಂಪ್‌ನ ನಿವಾಸಿ 19 ವರ್ಷದ ಫರ್ಹಾನ್ ಅಸ್ಲಾಂ ಖುರೇಷಿ, ಕದ್ದ ಬೈಕ್‌ಗಳನ್ನು ಮಾರಾಟ ಮಾಡುತ್ತಿರಲಿಲ್ಲ. ಬದಲಾಗಿ ಅವುಗಳನ್ನು ಜಾಲಿ ರೈಡ್‌ಗಳಿಗಾಗಿ ಇಟ್ಟುಕೊಂಡಿದ್ದಾನೆ. ಈತನ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ
ದೂರುದಾರ ದಿನಕರ್ ಮದನೆ (30) ಎಂಬುವವರು ಮನ್ಖುರ್ದ್‌ನ ಮಹಾರಾಷ್ಟ್ರ ನಗರ ಪ್ರದೇಶದಿಂದ ತನ್ನ ಮೋಟಾರ್‌ಸೈಕಲ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ ವಿಷಯ ಬಹಿರಂಗವಾಯಿತು. ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ಹುಡುಗನೊಬ್ಬ ಬೈಕ್ ನ ಬಳಿ ಆಟವಾಡುತ್ತಾ ಹ್ಯಾಂಡಲ್‌ಬಾರ್‌ನ ಬಳಿ ಯಾವುದೋ ನಿಗೂಢ ಉಪಕರಣವನ್ನು ಬಳಸಿದ ನಂತರ ನಡೆದುಕೊಂಡು ಹೋಗುತ್ತಾನೆ. ಕೆಲವು ನಿಮಿಷಗಳ ನಂತರ ಒಬ್ಬ ವ್ಯಕ್ತಿ ಕಾಣಿಸಿಕೊಂಡು ಬೈಕ್ ಅನ್ನು ಕಿಕ್‌ಸ್ಟಾರ್ಟ್ ಮಾಡಿ ಓಡಿಸಿಕೊಂಡು ಹೋಗಿದ್ದ.
ಪೊಲೀಸರು ವಿವೇಚನೆಯಿಂದ ಇತರ ಸಿಸಿ ಕ್ಯಾಮೆರಾ ದೃಶ್ಯಗಳ ಮೂಲಕ ಹುಡುಗನನ್ನು ಹುಡುಕಲು ಪ್ರಾರಂಭಿಸಿದರು ಟ್ರಾಂಬೆಯ ಚೀತಾ ಕ್ಯಾಂಪ್ ಪ್ರದೇಶದ ಬಳಿ ಅವನನ್ನು ಕಂಡುಹಿಡಿದರು. ವಿಚಾರಣೆ ವೇಳೆ ಬಾಲಕ ಸ್ನೇಹಿತನಿಂದ ಬೈಕ್ ಅನ್ ಲಾಕ್ ಮಾಡೋದನ್ನ ಕಲಿತಿದ್ದ. ಹಣ ಮತ್ತು ಜಾಲಿ ರೈಡ್‌ಗೆ ಬದಲಾಗಿ ಆತ ತನ್ನ ಈ ಜ್ಞಾನವನ್ನು ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.