ಕೆಲ ದಿನಗಳ ಹಿಂದಷ್ಟೇ ದಿನಪತ್ರಿಕೆಯೊಂದರ ವಧು/ವರಾನ್ವೇಷಣೆ ಕಾಲಂನಲ್ಲಿ ಹಾಕಲಾಗಿದ್ದ ಜಾಹೀರಾತೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆಯ್ಕೆಯಿಂದ ಮಹಿಳಾವಾದಿಯಾಗಿರುವ ಶಾರ್ಟ್ ಹೇರ್ ಹಾಗೂ ಚುಚ್ಚಿಸಿಕೊಂಡಿರುವ (ಕಿವಿ/ಮೂಗಿಗೆ) ವಧುವಿಗೆ ವರ ಬೇಕಾಗಿದ್ದಾನೆ ಎಂಬ ಜಾಹೀರಾತು ಇದಾಗಿತ್ತು. ವಿಚಿತ್ರ ವಿವರಣೆಯನ್ನ ಹೊಂದಿರುವ ಕಾರಣಕ್ಕಾಗಿ ಈ ಜಾಹೀರಾತು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
30 ವರ್ಷ ಪ್ರಾಯದ, ವಿದ್ಯಾಭ್ಯಾಸ ಮಾಡಿರುವ ಹಾಗೂ ಬಂಡವಾಳಶಾಹಿಗಳ ವಿರೋಧಿ ಸಾಮಾಜಿಕ ಕಾರ್ಯಕರ್ತೆಗೆ ಸುಂದರವಾಗಿರುವ 25 ರಿಂದ 28 ವರ್ಷ ಪ್ರಾಯದ ವರ ಬೇಕಾಗಿದ್ದಾನೆ ಎಂತಲೂ ಈ ಜಾಹೀರಾತಿನಲ್ಲಿ ಬರೆಯಲಾಗಿತ್ತು. ಅಲ್ಲದೇ ವರನು ಉದ್ಯಮದಲ್ಲಿ ಒಳ್ಳೆಯ ಲಾಭವನ್ನ ಇರುವ, ಸ್ವಂತ ಬಂಗಲೆ ಹಾಗೂ ಕನಿಷ್ಟ 20 ಎಕರೆ ತೋಟವನ್ನ ಹೊಂದಿರುವ ವರನಿಗೆ ಆದ್ಯತೆ ಎಂದು ಹೇಳಲಾಗಿತ್ತು.
ಕಾಮಿಡಿಯನ್ ಅದಿತಿ ಮಿತ್ತಲ್ ಟ್ವಿಟರ್ನಲ್ಲಿ ಈ ವರಾನ್ವೇಷಣೆಯ ಜಾಹೀರಾತನ್ನ ಹಂಚಿಕೊಂಡಿದ್ದು ಬಳಿಕ ಇದು ವೈರಲ್ ಆಗಿತ್ತು. ಈ ಟ್ವೀಟ್ಗೆ ನಟಿ ರಿಚಾ ಚಡ್ಡಾ ಸೇರಿದಂತೆ ಅನೇಕರು ಪ್ರತಿಕ್ರಿಯೆಯನ್ನೂ ನೀಡಿದ್ದರು.
ಆದರೆ ಅನೇಕರು ಈ ಜಾಹಿರಾತಿನ ಸತ್ಯಾಸತ್ಯೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಬಳಿಕ ಬಿಬಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಹೇಳಿದೆ.
ಬಿಬಿಸಿ ಜಾಹೀರಾತಿನಲ್ಲಿ ನೀಡಲಾಗಿದ್ದ ಜಿಮೇಲ್ ವಿಳಾಸವನ್ನ ಸಂಪರ್ಕಿಸಲು ಯತ್ನಿಸಿದೆ. ಈ ಮಹಿಳಾವಾದಿಯನ್ನ ಬಿಬಿಸಿ ಕೊನೆಗೂ ಪತ್ತೆ ಮಾಡಿದೆ. ಆದರೆ ಆಕೆ ತನ್ನ ಹೆಸರನ್ನ ಬಹಿರಂಗಪಡಿಸಲು ಒಪ್ಪಿಲ್ಲ. ಆದರೆ ತಮ್ಮ ಕಾವ್ಯನಾಮ ಸಾಕ್ಷಿ ಎಂದು ಹೇಳಿದ್ದಾರೆ.
ಸಾಕ್ಷಿಯ ಜನ್ಮ ದಿನದ ಪ್ರಯುಕ್ತ ಆಕೆಗೆ ತಮಾಷೆ ಮಾಡುವ ಸಲುವಾಗಿ ಆಕೆಯ ಸಹೋದರ ಶ್ರೀಜನ್ ಹಾಗೂ ಸ್ನೇಹಿತೆ ದಮಯಂತಿ (ನಿಜವಾದ ಹೆಸರುಗಳಲ್ಲ) ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆಕೆಯ 30ನೇ ವರ್ಷದ ಜನ್ಮದಿನದ ಹಿನ್ನೆಲೆ ಅವಳಿಗೆ ಕಾಟ ನೀಡಲು ಈ ರೀತಿ ಮಾಡಿದ್ದೇವೆ ಎಂದು ಶ್ರೀಜನ್ ಹೇಳಿದ್ದಾರೆ.
ನನ್ನ ಜನ್ಮದಿನದ ಹಿಂದಿನ ದಿನ ನನಗೆ ಇವರೆಲ್ಲ ಸೇರಿ ಈ ಇಮೇಲ್ ಅಡ್ರೆಸ್ ನೀಡಿದರು. ಮೇಲ್ ಐಡಿ ಪಾಸ್ವರ್ಡ್ ನೋಡಿದ ಬಳಿಕ ನಾನೇನು ಮಾಡೋದು ಎನ್ನೋದು ನನಗೆ ಹೊಳೆಯಲಿಲ್ಲ. ಬೆಳಗ್ಗೆ ಸುಮಾರಿಗೆ ನನ್ನ ಸಹೋದರ ದಿನ ಪತ್ರಿಕೆಯಲ್ಲಿ ಇವರು ನೀಡಿದ್ದ ಜಾಹೀರಾತನ್ನ ತೋರಿಸಿದ. ನಾವೆಲ್ಲ ಬಿದ್ದು ಬಿದ್ದು ನಕ್ಕೆವು. ಇದೊಂದು ತಮಾಷೆ ಮಾತ್ರ ಎಂದು ಹೇಳಿದ್ದಾರೆ.