alex Certify BIG NEWS: 1 – 10ನೇ ತರಗತಿ ಮಕ್ಕಳಿಗೆ ಭರ್ಜರಿ ಸುದ್ದಿ: ಶಾಲಾ ಬ್ಯಾಗ್ ಹೊರೆ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 1 – 10ನೇ ತರಗತಿ ಮಕ್ಕಳಿಗೆ ಭರ್ಜರಿ ಸುದ್ದಿ: ಶಾಲಾ ಬ್ಯಾಗ್ ಹೊರೆ ಇಳಿಕೆ

ಬೆಂಗಳೂರು: ಯಶಪಾಲ ಶರ್ಮಾ ಸಮಿತಿಯ ಹೊರೆಯಿಲ್ಲದ ಕಲಿಕೆ ಅನುಸಾರ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ತಗ್ಗಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊರೆಯಿಲ್ಲದೇ ಸಂತಸದಾಯಕವಾಗಿ ಕಲಿಯುವ ವಾತಾವರಣವನ್ನು ರೂಪಿಸುವ ಸಲುವಾಗಿ Centre for Child and Law, NLSUI, Benga ri ರವರ ಸಹಯೋಗದೊಂದಿಗೆ ಡಿ.ಎಸ್.ಇ.ಆರ್.ಟಿ ರವರು ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ವರದಿಯಲ್ಲಿ ವಿದ್ಯಾರ್ಥಿಗಳು ಅವರ ದೇಹದ ತೂಕದ ಶೇಕಡ 10 ರಿಂದ 15 ರಷ್ಟು ತೂಕದ ಶಾಲಾ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬಹುದಾಗಿ ಮೂಳೆ ತಜ್ಞರು ಶಿಫಾರಸು ಮಾಡಿರುತ್ತಾರೆ. ಈ ಕುರಿತು ಸರ್ಕಾರಿ ಆದೇಶದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಸೂಚಿಸಿದೆ.

ವಿದ್ಯಾರ್ಥಿಯ ಶಾಲಾಬ್ಯಾಗ್‌ ತೂಕ ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

1 -2 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 1.5 ರಿಂದ 2 ಕೆಜಿ

3 -5 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 2 ರಿಂದ 3 ಕೆಜಿ

6 -8 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 3 ರಿಂದ 5 ಕೆಜಿ

9 -10 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 4 ರಿಂದ 5 ಕೆಜಿ

ಶಾಲಾ ಎಸ್.ಎಂ.ಸಿ./ ಎಸ್.ಡಿ.ಎಂ.ಸಿ ಹಾಗೂ ಶಾಲಾ ಮುಖ್ಯಸ್ಥರು ಮೇಲ್ಕಂಡ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.

1 ರಿಂದ 5ನೇ ತರಗತಿವರೆಗೆ ಎನ್.ಸಿ.ಇ.ಆರ್.ಟಿ ನಿಗದಿಪಡಿಸಿರುವ ಪಠ್ಯಕ್ರಮವನ್ನು ಹೊರತುಪಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಿ ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸತಕ್ಕದ್ದು ಹಾಗೂ ಈ ಬಗ್ಗೆ ನಿಗಾವಹಿಸಲು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲು ವಿಶೇಷ ತಂಡವನ್ನು ರಚಿಸತಕ್ಕದ್ದು,

ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿ. ಮತ್ತು ಇ.ಸಿ.ಒಗಳು, ಬ್ಲಾಕ್ ಹಂತದಲ್ಲಿ ಬಿ.ಆರ್.ಸಿ. ಮತ್ತು ಬಿ.ಇ.ಒ. ಅವರು, ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ) ಮತ್ತು ಪ್ರಾಂಶುಪಾಲರು ಡಯಟ್ ಅವರು ಶಾಲಾ ಬ್ಯಾಗ್ ಹೊರೆ ಕಡಿತಗೊಳಿಸುವ ಕ್ರಮಗಳನ್ನು ಅನುಷ್ಠಾನಗೊಳಿಸಿರುವ ಬಗ್ಗೆ ಶಾಲಾ ಭೇಟಿ ಮತ್ತು ಪರಿಶೀಲನೆ ಮಾಡುವುದರ ಮೂಲಕ ಖಾತ್ರಿಪಡಿಸಿಕೊಳ್ಳಲು ತಿಳಿಸಿದೆ.

1 ಮತ್ತು 2ನೇ ತರಗತಿ ಬೋಧನೆಯು ಬುನಾದಿ ಹಂತದ ಶಿಕ್ಷಣವಾಗಿದ್ದು, ವಿದ್ಯಾರ್ಥಿಗಳು ಸಂತಸ ಮತ್ತು ಸಕ್ರಿಯವಾಗಿ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡುವುದು, ಈ ವಿದ್ಯಾರ್ಥಿಗಳಿಗೆ ಕಲಿಕೆಯ ಮನರ್ಬಲನಕ್ಕಾಗಿ ಯಾವುದೇ ರೀತಿಯ ಗೃಹಪಾಠ ಅಥವಾ ಮನೆಗೆಲಸವನ್ನು ನೀಡದಂತೆ ಕ್ರಮವಹಿಸುವುದು.

1 ರಿಂದ 5ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸದಂತೆ ಕ್ರಮವಹಿಸುವುದು,

3 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲಿಕಾ ಬಲವರ್ಧನೆ ಚಟುವಟಿಕೆಗಳನ್ನು ಶಾಲೆಗಳಲ್ಲಿಯೇ ನಿರ್ವಹಿಸುವುದು ಅತ್ಯಂತ ಅಗತ್ಯವಿರುವ ಹಾಗೂ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಸೀಮಿತ ಪ್ರಮಾಣದಲ್ಲಿ ಮನೆಗೆಲಸ ನೀಡುವಂತೆ ಕ್ರಮವಹಿಸುವುದು.

ವಿದ್ಯಾರ್ಥಿಗಳು ಕಲಿಕೆಯ ಎಲ್ಲಾ ಪಠ್ಯ ಪುಸ್ತಕಗಳು /ನೋಟ್ ಪುಸ್ತಕಗಳು ಮತ್ತು ಅಭ್ಯಾಸ ಪುಸ್ತಕಗಳನ್ನು ಪ್ರತಿ ದಿನವೂ ತರುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿವಸದ ವೇಳಾಪಟ್ಟಿಗೆ ಅನುಗುಣವಾಗಿ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ಶಾಲೆಗೆ ತರಲು ಸೂಚನೆ ನೀಡುವುದು.

ಅಭ್ಯಾಸ ಚಟುವಟಿಕೆಗಳನ್ನು ಹಾಳೆಗಳಲ್ಲಿ ಮಾಡಿಸಿ ಫೈಲ್ ಮಾಡಿಸುವುದು. ಅವಶ್ಯಕತೆ ಇದ್ದಾಗ ಪರಾಮರ್ಶಿಸಲು ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡಲು ಪ್ರೇರೇಪಿಸುವುದು ಅಥವಾ ಅಭ್ಯಾಸ ಪುಸ್ತಕಗಳನ್ನು ಬಳಸಿದಲ್ಲಿ ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡತಕ್ಕದ್ದು.

ವಿದ್ಯಾರ್ಥಿಯು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುವ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು, ಲೇಖನ ಸಾಮಗ್ರಿಗಳು, ಕಲಿಕಾ ಉಪಕರಣಗಳು ಹಾಗೂ ಇನ್ನಿತರ ವಸ್ತುಗಳನ್ನು ತರಗತಿ ಒಳಗೆ ಶೇಖರಿಸಿಡುವಂತೆ ಅಗತ್ಯ ಅನುಕೂಲತೆಗಳನ್ನು ಕಲ್ಪಿಸತಕ್ಕದ್ದು,

ಶಾಲಾ ಗ್ರಂಥಾಲಯಗಳಲ್ಲಿ ಶಬ್ದಕೋಶ, ಸಮಾನಾರ್ಥಕ ಪದಕೋಶ, ಅಟ್ಲಾಸ್, ಜ್ಞಾನ ವಿಜ್ಞಾನ ಕೋಶಗಳಂತಹ ಪರಾಮರ್ಶನ ಸಾಮಗ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವಂತೆ ಹಾಗೂ ಮಕ್ಕಳು ಇವುಗಳನ್ನು ಅವಶ್ಯಕತೆ ಇದ್ದಾಗ ಬಳಸಿಕೊಳ್ಳುವಂತೆ ವ್ಯವಸ್ಥೆ ಮಾಡುವುದು.

100 ರಿಂದ 200 ಪುಟ ಮೀರದ ನೋಟ್ ಪುಸ್ತಕಗಳನ್ನು ಬಳಸುವಂತೆ ಕ್ರಮವಹಿಸುವುದು.

ಕಡಿಮೆ ಖರ್ಚಿನ ಹಗುರವಾದ ಹಾಗೂ ದೀರ್ಘ ಕಾಲ ಬಾಳಿಕೆ ಬರುವಂತಹ ಶಾಲಾಬ್ಯಾಗ್ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು.

ಮಕ್ಕಳು ಶಾಲೆಗಳಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ತಪ್ಪಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಲೆಯಲ್ಲಿಯೇ ಕಲ್ಪಿಸತಕ್ಕದ್ದು.

ಅತಿಯಾದ ಹೊರೆ ಇರುವ ಶಾಲಾಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...