ಸಾಕಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ತಲೈವಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದೆ. ಗಣೇಶ ಚತುರ್ಥಿಯ ನಿಮಿತ್ತ ಶುಕ್ರವಾರದಂದು ಸಿನಿಮಾ ಬಿಡುಗಡೆ ಮಾಡಲಾಗಿತ್ತು.
ಎ ಎಲ್ ವಿಜಯ್ ನಿರ್ದೇಶನದ ಈ ಸಿನಿಮಾವು ಮೊದಲ ದಿನ ಕೇವಲ 1.25 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.
ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಜೀವನ ಆಧಾರಿತ ಈ ಸಿನಿಮಾ ಇಡೀ ದೇಶದಲ್ಲಿ ಕೇವಲ 1.25 ಕೋಟಿ ರೂಪಾಯಿ ಗಳಿಸಲು ಮಾತ್ರ ಶಕ್ತವಾಗಿದೆ. ಹಿಂದಿ ಭಾಷೆಗೆ ಹೋಲಿಸಿದ್ರೆ ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಸಿನಿಮಾ ಕೊಂಚ ಹೆಚ್ಚಿನ ಗಳಿಕೆ ಸಂಪಾದಿಸಿದೆ.
ಹಿಂದಿ ಭಾಷೆಯಲ್ಲಿ ತಲೈವಿ ಮೊದಲ ದಿನ ಕೇವಲ 20-25 ಲಕ್ಷ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದೆ. ಇದರಲ್ಲಿ ಉತ್ತರ ಪ್ರದೇಶ, ದೆಹಲಿ ಹಾಗೂ ಗುಜರಾತ್ನಲ್ಲಿ ಸಿನಿಮಾಗೆ ಕೊಂಚ ರೆಸ್ಪಾನ್ಸ್ ಸಿಕ್ಕಿದೆ. ತಮಿಳುನಾಡಿನಲ್ಲಿ ಈ ಸಿನಿಮಾ ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದ್ದು 80 ಲಕ್ಷ ರೂಪಾಯಿ ಗಳಿಸಿದೆ.
ತಲೈವಿ ಸೇರಿದಂತೆ ಇತ್ತೀಚಿಗೆ ತೆರೆ ಕಂಡ ಶಾಂಗ್-ಚಿ, ಟೆನ್ ರಿಂಗ್ಸ್, ಫಾಸ್ಟ್ & ಫ್ಯೂರಿಯಸ್, ಚೆಹ್ರೆ ಹಾಗೂ ಬೆಲ್ ಬಾಟಂ ಮಹಾರಾಷ್ಟ್ರದಲ್ಲಿ ತೆರೆ ಕಂಡಿಲ್ಲ. ಕೊರೊನಾ 2ನೆ ಅಲೆಯ ಬಳಿಕ ಮಹಾರಾಷ್ಟ್ರದಲ್ಲಿ ಯಾವುದೇ ಸಿನಿಮಂದಿರಗಳು ಬಾಗಿಲು ತೆರೆದಿಲ್ಲ.