ತೆಲಗು ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಸಂದರ್ಶನದ ಕೆಲ ವಿಡಿಯೋಗಳು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಂದರ್ಶನದಲ್ಲಿ ಬಾಲಕೃಷ್ಣ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ತಮಗೆ ಯಾರೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವು ತಮ್ಮ ತಂದೆ ದಿವಂಗತ ಎನ್ಟಿಆರ್ರ ಕಾಲ್ಬೆರಳ ಉಗುರಿಗೆ ಸಮ ಎಂದು ಹೇಳಿದ್ದಾರೆ.
ಎ.ಆರ್. ರೆಹಮಾನ್ ಎಂದರೆ ಯಾರೆಂದೂ ನನಗೆ ತಿಳಿದಿಲ್ಲ. ಅವರು ಆಸ್ಕರ್ ಗೆದ್ದಿದ್ದಾರಂತೆ ಆದರೆ ನನಗೆ ಅವರು ಯಾರೆಂದು ತಿಳಿದಿಲ್ಲ. ಒಂದು ಕಾಲದಲ್ಲಿ ಅವರು ಹಿಟ್ ಹಾಡುಗಳನ್ನ ಸಿನಿರಂಗಕ್ಕೆ ನೀಡುತ್ತಿದ್ದರು ಎಂದು ಟಿವಿ ಸಂದರ್ಶನವೊಂದರಲ್ಲಿ ಬಾಲಕೃಷ್ಣ ಹೇಳಿದ್ದಾರೆ.
ಇನ್ನು ಭಾರತ ರತ್ನದ ವಿಚಾರವಾಗಿಯೂ ಮಾತನಾಡಿದ ಬಾಲಕೃಷ್ಣ, ನನ್ನ ಪ್ರಕಾರ ಭಾರತ ರತ್ನ ಗೌರವವು ನನ್ನ ತಂದೆಯ ಕಾಲ್ಬೆರಳಿಗೆ ಸಮ. ನಮ್ಮ ಕುಟುಂಬವು ಟಾಲಿವುಡ್ಗೆ ನೀಡಿರುವ ಕೊಡುಗೆಗೆ ಸರಿ ಸಮಾನವಾದ ಪ್ರಶಸ್ತಿ ಯಾವುದೂ ಇಲ್ಲ. ಹೀಗಾಗಿ ಪ್ರಶಸ್ತಿಗಳಿಗೆ ಬೇಸರವಾಗಬೇಕೆ ಹೊರತು ನನ್ನ ಕುಟುಂಬಕ್ಕಲ್ಲ ಎಂದು ಹೇಳಿದ್ದಾರೆ.
ಟ್ವಿಟರ್ನಲ್ಲಿ ಸಂದರ್ಶನದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಭಾರತೀಯ ನೆಟ್ಟಿಗರು ಗರಂ ಆಗಿದ್ದು #whoisbalakrishna ಎಂಬ ಹ್ಯಾಶ್ಟ್ಯಾಗ್ನ ಅಡಿಯಲ್ಲಿ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ.