ನವದೆಹಲಿ: ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರ ಬೆಂಗಾವಲು ವಾಹನವು ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಜೀಪಿನಲ್ಲಿದ್ದ ಬಿಹಾರ ಮಿಲಿಟರಿ ಪೊಲೀಸ್ (ಬಿಎಂಪಿ) ಯ ಆರು ಸಿಬ್ಬಂದಿ ಸೋಮವಾರ ತಡರಾತ್ರಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಕಟಿಹಾರ್ಗೆ ಹೋಗುವಾಗ ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದರು. ಪ್ರೋಟೋಕಾಲ್ ಪ್ರಕಾರ, ಅವರನ್ನು ಬೆಂಗಾವಲು ಮಾಡಲು ನಾವು ಪೊಲೀಸ್ ಲೈನ್ಸ್ನಿಂದ ವಾಹನವನ್ನು ಕಳುಹಿಸಿದ್ದೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಪೊಲೀಸ್ ಜೀಪ್, ಪೂರ್ಣಿಯಾ-ಕಟಿಹಾರ್ ರಸ್ತೆಯ ರಾಂಗ್ ಸೈಡ್ನಲ್ಲಿ ಎದುರು ಬದಿಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ವಾಹನವನ್ನು ಚಲಾಯಿಸುತ್ತಿದ್ದ ಹೋಮ್ ಗಾರ್ಡ್ ಮೊಹಮ್ಮದ್ ಹಲೀಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಗಾಯಗೊಂಡ ಬಿಎಂಪಿ ಜವಾನರನ್ನು ಪೂರ್ಣಿಯಾದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.