ಸರ್ಕಾರದ ಪಾಲಿಗೆ ಬಿಳಿ ಆನೆಯಂತಾಗಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಖರೀದಿ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ.
ಹರಾಜಿನ ಮೂಲಕ ನಡೆದ ಮಾರಾಟ ಪ್ರಕ್ರಿಯೆಯಲ್ಲಿ ಸರ್ಕಾರವು 15000 ಕೋಟಿಯಿಂದ 20 ಸಾವಿರ ಕೋಟಿಗಳವರೆಗೆ ಮೀಸಲು ಬೆಲೆ ನಿಗದಿ ಮಾಡಿತ್ತು ಎಂದು ತಿಳಿದುಬಂದಿದೆ.
ಆದರೆ ಈ ಬಗ್ಗೆಯೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಟಾಟಾ ಮೀಸಲು ದರಕ್ಕಿಂತ 3000 ಕೋಟಿ ಹಾಗೂ ಸ್ಪೈಸ್ ಜೆಟ್ ಅಜಯ್ ಸಿಂಗ್ರಿಗಿಂತ 5000 ಕೋಟಿ ಅಧಿಕ ಹಣಕ್ಕೆ ಮಹಾರಾಜನನ್ನು ಕೊಂಡುಕೊಂಡಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಷೇರು ಮಾರಾಟವು ನವೆಂಬರ್-ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಏರ್ ಇಂಡಿಯಾ ಬಂಡವಾಳ ಹೂಡಿಕೆ ಅನುಮೋದನೆ ನೀಡಿರುವ ಬಗ್ಗೆ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರವು ತಳ್ಳಿ ಹಾಕಿದೆ. ಇದು ಅಂತಿಮಗೊಂಡ ಬಳಿಕ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಹೇಳಿದೆ. ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ತನ್ನ ಟ್ವೀಟ್ ಮೂಲಕ ಮಾಧ್ಯಮಗಳ ವರದಿಯನ್ನು ‘ತಪ್ಪು’ ಎಂದು ಹೇಳಿದೆ.
ಏರ್ ಇಂಡಿಯಾ ಮರುಹೂಡಿಕೆಗೆ ಕೇಂದ್ರ ಸರ್ಕಾರವು ಬಿಡ್ ಸಲ್ಲಿಸಲು ಅನುಮೋದನೆ ನೀಡಿರುವ ಬಗ್ಗೆ ಮಾಧ್ಯಮಗಳ ವರದಿಯು ತಪ್ಪಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ.
ಟಾಟಾ ಸಮೂಹದ ಪ್ರತಿನಿಧಿಗಳು ಹಾಗೂ ಅಜಯ್ ಸಿಂಗ್ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಕಾರ್ಯದರ್ಶಿಗಳ ಸಮಿತಿಯು ಏರ್ಲೈನ್ನ ಮೀಸಲು ಬೆಲೆಯನ್ನು ಅಂತಿಮಗೊಳಿಸಿತ್ತು ಎಂದು ಹೇಳಲಾಗಿತ್ತು.