alex Certify ದೇವಾಲಯದ ಬೀಗ ಒಡೆದು ದಲಿತರಿಗೆ ಪ್ರವೇಶ ಕಲ್ಪಿಸಿದ ಅಧಿಕಾರಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದ ಬೀಗ ಒಡೆದು ದಲಿತರಿಗೆ ಪ್ರವೇಶ ಕಲ್ಪಿಸಿದ ಅಧಿಕಾರಿಗಳು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರುಮರಡಿ ಗೊಲ್ಲರಹಟ್ಟಿಯಲ್ಲಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ನಿಲ್ಲಿಸಿ ಹಾಕಿದ್ದ ಬೀಗವನ್ನು ತಾಲೂಕು ಆಡಳಿತದ ಅಧಿಕಾರಿಗಳು ಒಡೆಸಿ ದಲಿತರಿಗೆ ಪ್ರವೇಶ ಕಲ್ಪಿಸಿದ್ದಾರೆ.

ಗೊಲ್ಲರಹಟ್ಟಿಗೆ ದಲಿತ ಯುವಕ ಪ್ರವೇಶ ಮಾಡಿದ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿ ದೇವಾಲಯದಲ್ಲಿ ಪೂಜೆ ನಿಲ್ಲಿಸಲಾಗಿತ್ತು. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮಂಗಳವಾರ ವಿವಿಧ ದಲಿತ ಸಂಘಟನೆಗಳ ಮುಖಂಡರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ದಲಿತ ಯುವಕ ಮಾರುತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು. ಗೊಲ್ಲರಹಟ್ಟಿಯಲ್ಲಿರುವ ಕಂಬದ ರಂಗಸ್ವಾಮಿ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸ್ ಬಂದೋಬಸ್ತ್ ನಲ್ಲಿ ಹೋರಾಟಗಾರರೊಂದಿಗೆ ಗೊಲ್ಲರಹಟ್ಟಿಗೆ ತೆರಳಿದ ಅಧಿಕಾರಿಗಳು ದೇವಾಲಯದ ಬೀಗ ಕೊಡುವಂತೆ ಗೊಲ್ಲರಹಟ್ಟಿ ನಿವಾಸಿಗಳಿಗೆ ಕೇಳಿದ್ದಾರೆ. ಯಾರೂ ಬೀಗ ಕೊಡದಿದ್ದಾಗ ಉಪ ವಿಭಾಗ ಅಧಿಕಾರಿ ಕೆ.ಜಿ. ಕಾಂತರಾಜ್, ಎಎಸ್ಪಿ ಜಿ. ಕೃಷ್ಣಮೂರ್ತಿ, ಡಿವೈಎಸ್ಪಿ ಹಾಲಮೂರ್ತಿ ರಾವ್, ತಹಶೀಲ್ದಾರ್ ವಿ.ಎಸ್. ರಾಜೀವ್ ಅವರ ಸಮ್ಮುಖದಲ್ಲಿ ತಾಲೂಕು ಆಡಳಿತ ಸಿಬ್ಬಂದಿ ಗೇಟ್ ಮತ್ತು ಬಾಗಿಲಲ್ಲಿ ಹಾಕಿದ್ದ ಬೀಗಗಳನ್ನು ಒಡೆದಿದ್ದಾರೆ. ಹಲ್ಲೆಗೆ ಒಳಗಾಗಿದ್ದ ಮಾರುತಿ ಮೂಲಕವೇ ಪೂಜೆ ಮಾಡಿಸಲಾಗಿದೆ. ನಂತರ ದೇವಸ್ಥಾನದಿಂದ ಹೊರಗೆ ಬಂದು ಸಂವಿಧಾನದ ಪೀಠಿಕೆ ಬೋಧಿಸಲಾಗಿದ್ದು, ಇಂತಹ ಘಟನೆಗಳ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಗೊಲ್ಲರಹಟ್ಟಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...