ಅಸಾಧ್ಯವಾದದ್ದು ಯಾವುದಿದೆ ಎಂಬಂತೆ ಪರ್ವತ ಶ್ರೇಣಿಯಲ್ಲಿ ಚಾರಣಿಗರಿಗೆ ಸೌಲಭ್ಯ ಕಲ್ಪಿಸಲು ಇಂಟರ್ನೆಟ್ ವ್ಯವಸ್ಥೆ ಮಾಡುವ ಪ್ರಯತ್ನ ತಾಂಜಾನಿಯಾದಲ್ಲಿ ನಡೆದಿದೆ.
ತಾಂಜಾನಿಯಾ ಕಿಲಿಮಂಜಾರೋ ಪರ್ವತದ ಇಳಿಜಾರಿನಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಗಳನ್ನು ಸ್ಥಾಪಿಸಿದ್ದು, ಇದರಿಂದ ಚಾರಣ ಸಂದರ್ಭದಲ್ಲಿ ಸ್ಮಾರ್ಟ್ಫೋನ್ ಹೊಂದಿರುವವರು ಟ್ವೀಟ್ ಮಾಡಲು, ಇನ್ಸ್ಟಾಗ್ರಾಮ್ ಅಥವಾ ವಾಟ್ಸಪ್ ಮಾಡಲು ಅವಕಾಶವಿದೆ.
ಕಿಲಿಮಂಜಾರೋ ಪರ್ವತವು ಟಾಂಜಾನಿಯಾ ಮತ್ತು ನೆರೆಯ ಕೀನ್ಯಾದಲ್ಲಿ ಪ್ರವಾಸೋದ್ಯಮ ಆದಾಯದ ಪ್ರಮುಖ ಮೂಲವಾಗಿದೆ, ಪ್ರತಿ ವರ್ಷ ಸುಮಾರು 35,000 ಜನರು ಈ ಶಿಖರ ಏರಲು ಪ್ರಯತ್ನಿಸುತ್ತಾರೆ.
ಸರ್ಕಾರಿ ಸ್ವಾಮ್ಯದ ತಾಂಜಾನಿಯಾ ಟೆಲಿಕಮ್ಯುನಿಕೇಶನ್ಸ್ ಕಾರ್ಪೊರೇಷನ್ ಮಂಗಳವಾರ 3,720 ಮೀಟರ್ (12,200 ಅಡಿ) ಎತ್ತರದಲ್ಲಿ ಬ್ರಾಡ್ಬ್ಯಾಂಡ್ ನೆಟ್ ವರ್ಕ್ ಅನ್ನು ಸ್ಥಾಪಿಸಿತು. ಮಾಹಿತಿ ಸಚಿವ ನೇಪೆ ನ್ನೌಯೆ ಈವೆಂಟ್ ಅನ್ನು ಐತಿಹಾಸಿಕ ಎಂದು ಕರೆದರು.
ಎಲ್ಲಾ ಅಧಿಕೃತ ಚಾರಣಿಗರಿಗೆ ಇದರ ಸಂಪರ್ಕ ಸಿಗಲಿದೆ. 5,895 ಮೀಟರ್ (19,300 ಅಡಿ) ಪರ್ವತದ ಶಿಖರವು ವರ್ಷದ ಅಂತ್ಯದ ವೇಳೆಗೆ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಲಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ವರ್ಷ, ತಾಂಜೇನಿಯಾದ ಸರ್ಕಾರವು ಕಿಲಿಮಂಜಾರೋದ ದಕ್ಷಿಣ ಭಾಗದಲ್ಲಿ ಕೇಬಲ್ ಕಾರ್ ನಿರ್ಮಿಸುವ ಯೋಜನೆಗಳನ್ನು ಘೋಷಿಸಿತ್ತು. ಆದರೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮೌಂಟ್ ಎವರೆಸ್ಟ್ನಲ್ಲಿ ಪರ್ವತಾರೋಹಿಗಳು ವೈಫೈ, ಪವರ್ ಜನರೇಟರ್ ಮತ್ತು ಸ್ಮಾರ್ಟ್ಫೋನ್ಗಳನ್ನು ಬಳಸಲು ಸಾಧ್ಯವಾಗಿದೆ. ಹೀಗಾಗಿ ಅವಘಡ ನಡೆದ ಸಂದರ್ಭದಲ್ಲಿ ನೆರವು ಪಡೆಯಲು ಸಾಧ್ಯವಾಗಿಸುತ್ತದೆ.