ಬಿಡುಗಡೆಗೊಂಡ ಚಿತ್ರಗಳನ್ನು ಅದೇ ದಿನ ಚಿತ್ರಮಂದಿರಗಳಲ್ಲಿ ರೆಕಾರ್ಡ್ ಮಾಡಿಕೊಂಡು ತನ್ನ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಪಾಲಿಗೆ ದುಃಸ್ವಪ್ನವಾಗಿದ್ದ ‘ತಮಿಳ್ ರಾಕರ್ಸ್’ ತಂಡದ ಸದಸ್ಯನೊಬ್ಬನನ್ನು ಕೇರಳ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮಧುರೈ ಮೂಲದ 33 ವರ್ಷದ ಜೆಬ್ ಸ್ಟೀಫನ್ ಬಂಧಿತ ಆರೋಪಿಯಾಗಿದ್ದು, ಈತ ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅಭಿನಯದ ‘ರಾಯನ್’ ಸಿನಿಮಾ ವನ್ನು ತಿರುವನಂತಪುರದ ಚಿತ್ರಮಂದಿರದಲ್ಲಿ ತನ್ನ ಮೊಬೈಲ್ ಮೂಲಕ ಚಿತ್ರೀಕರಣ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲಾಗಿದೆ.
ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ‘ತಮಿಳ್ ರಾಕರ್ಸ್’ ವೆಬ್ಸೈಟ್ ಪರವಾಗಿ ಕೆಲಸ ಮಾಡುತ್ತಿದ್ದು, ಬಿಡುಗಡೆಗೊಂಡ ಸಿನಿಮಾಗಳನ್ನು ಅದೇ ದಿನ ಲಕ್ಷಕ್ಕೂ ಅಧಿಕ ಮೌಲ್ಯದ ತನ್ನ ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿದ್ದ. ಬಳಿಕ ಇದನ್ನು ‘ತಮಿಳ್ ರಾಕರ್ಸ್’ ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತಿದ್ದ. ಅಲ್ಲದೆ ಇದಕ್ಕಾಗಿ ಈತನಿಗೆ ಸಿನಿಮಾ ಒಂದಕ್ಕೆ 5000 ರೂ. ಗಳನ್ನು ಪಾವತಿಸಲಾಗುತ್ತಿತ್ತು.
ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ‘ಗುರುವಾಯೂರಪ್ಪನ್ ಅಂಬಲಾನದೈ’ ಎಂಬ ಮಲಯಾಳಂ ಚಿತ್ರ ಬಿಡುಗಡೆಗೊಂಡ ದಿನವೇ ಪೈರಸಿಗೊಂಡು ‘ತಮಿಳ್ ರಾಕರ್ಸ್’ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿದ್ದರಿಂದ ಮನನೊಂದಿದ್ದ ಚಿತ್ರದ ನಿರ್ಮಾಪಕಿ ಸುಪ್ರಿಯಾ ಮೆನನ್ ಕೇರಳ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದು ಕಾರ್ಯಾಚರಣೆ ನಡೆಸಿದ ಅವರು ಸ್ಟೀಫನ್ ನನ್ನು ಬಂಧಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಹಾಗೂ ‘ಕಲ್ಕಿ’ ಚಿತ್ರವನ್ನು ಸ್ಟೀಫನ್ ಚಿತ್ರಮಂದಿರದಲ್ಲಿ ರೆಕಾರ್ಡ್ ಮಾಡಿಕೊಂಡು ‘ತಮಿಳು ರಾಕರ್ಸ್’ ವೆಬ್ಸೈಟ್ ಗೆ ಅಪ್ಲೋಡ್ ಮಾಡಿರುವುದು ತಿಳಿದು ಬಂದಿದೆ. ಸ್ಟೀಫನ್ ಬಂಧನದ ಮೂಲಕ ‘ತಮಿಳು ರಾಕರ್ಸ್’ ವೆಬ್ಸೈಟ್ ನ ಪ್ರಮುಖರನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ಹೊಂದಿದ್ದಾರೆ.