ಕಸ ಗುಡಿಸುವ ವೇಳೆ ಕಸದ ರಾಶಿಯ ನಡುವೆ ಸಿಕ್ಕ ಬರೋಬ್ಬರಿ 4,90,000 ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ಪೌರ ಕಾರ್ಮಿಕೆಯೊಬ್ಬರು ಪ್ರಾಮಾಣಿಕತೆ ತೋರಿದ್ದಾರೆ. ತಮಿಳುನಾಡಿನ ತಿರುವೊಟ್ಟಿಯುರ್ ಬೀದಿಯಲ್ಲಿ ಕಸ ಗುಡಿಸುತ್ತಿದ್ದ ವೇಳೆ ಮೇರಿಯು ಕಸದ ರಾಶಿಯ ನಡುವೆ ಪ್ಲಾಸ್ಟಿಕ್ ಚೀಲವನ್ನು ಎಸೆಯುತ್ತಿದ್ದಾಗ ನಾಣ್ಯದ ಶಬ್ದವನ್ನು ಕೇಳಿದ್ದಾಳೆ. ಮೊದಲು ಈಕೆ ಯಾವುದೋ ನಾಣ್ಯ ಇಲ್ಲವೇ ಲೋಹದ ವಸ್ತು ಇರಬಹುದು ಎಂದು ಭಾವಿಸಿದ್ದಳು. ಆದರೆ ಈ ಪ್ಲಾಸ್ಟಿಕ್ ಚೀಲವನ್ನು ತೆಗೆದು ನೋಡಿದ ವೇಳೆ ಮೇರಿಗೆ ಆಶ್ಚರ್ಯ ಕಾದಿತ್ತು. ಚಿನ್ನದ ನಾಣ್ಯಗಳನ್ನು ನೋಡಿದ ತಕ್ಷಣವೇ ಮೇರಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ.
ಕೊರೊನಾ ಲಸಿಕೆ ಪಡೆಯಲಿರುವ ಮಕ್ಕಳಿಗೆಂದೇ ನಿರ್ಮಾಣವಾಗಿದೆ ಈ ‘ವಿಶಿಷ್ಟ’ ಲಸಿಕಾ ಕೇಂದ್ರ..!
ಚಿನ್ನದ ನಾಣ್ಯಗಳು ಸಿಕ್ಕ ತಕ್ಷಣವೇ ಪೊಲೀಸರು ಕಳೆದ ಕೆಲ ದಿನಗಳ ಹಿಂದೆ ಯಾರಾದರೂ ಚಿನ್ನ ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದಾರಾ ಎಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಣ್ಣಾಮಲೈ ನಗರದ ಉದ್ಯಮಿ ರಮಣ್ ಅವರ ದೂರು ಪೊಲೀಸರ ಗಮನಕ್ಕೆ ಬಂದಿದೆ. ರಮಣ್ ಮಾರ್ಚ್ ತಿಂಗಳಲ್ಲಿ ಈ ನಾಣ್ಯಗಳನ್ನು ಖರೀದಿಸಿದ್ದರು. ಕಳ್ಳರಿಂದ ಈ ನಾಣ್ಯ ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಂಚದ ಕೆಳಗೆ ಇರಿಸಿದ್ದರು. ಆದರೆ ಆಯುಧ ಪೂಜೆಗೂ ಮುನ್ನ ಮನೆ ಸ್ವಚ್ಛ ಮಾಡುವ ಭರದಲ್ಲಿ ಈ ಚೀಲವು ಕಸದ ಬುಟ್ಟಿ ಸೇರಿತ್ತು.
ಪೊಲೀಸರಿಗೆ ದೂರು, ಹಾಗೂ ಅನೇಕ ಕಡೆಗಳಲ್ಲಿ ಹುಡುಕಿದ ಬಳಿಕವೂ ರಮಣ್ ಹಾಗೂ ಕುಟುಂಬಕ್ಕೆ ಚಿನ್ನದ ನಾಣ್ಯಗಳು ಸಿಕ್ಕೇ ಇರಲಿಲ್ಲ. ಆದರೆ ಮೇರಿಯ ಪ್ರಾಮಾಣಿಕತೆಯಿಂದ ಇಂದು ಆ ಎಲ್ಲ ನಾಣ್ಯಗಳು ಪುನಃ ರಮಣ್ ಕೈ ಸೇರಿದಂತಾಗಿದೆ.