ವೃದ್ಧೆಯ ಬಳಿ ಮೀನಿನ ವಾಸನೆ ಬರುತ್ತಿದೆ ಎಂದು ಆರೋಪಿಸಿದ ಕಂಡಕ್ಟರ್ ಆಕೆಯನ್ನು ನಿರ್ದಾಕ್ಷಿಣ್ಯವಾಗಿ ಬಸ್ನಿಂದ ಕೆಳಗಿಳಿಸಿದ ಅಮಾನವೀಯ ಘಟನೆಯು ತಮಿಳು ನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಂಡಕ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಮೀನುಗಾರ ಮಹಿಳೆಯನ್ನು ಮಾರ್ಗ ಮಧ್ಯದಲ್ಲಿ ಇಳಿಸಿದ ಕಂಡಕ್ಟರ್ ಕ್ರಮದ ಬಗ್ಗೆ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೃದ್ಧೆಯ ಬಳಿ ವಿಪರೀತ ಮೀನಿನ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕೋಪಗೊಂಡ ಕಂಡಕ್ಟರ್ ಬಸ್ನಿಂದ ಇಳಿಯುವಂತೆ ವೃದ್ಧೆಗೆ ತಾಕೀತು ಮಾಡಿದ್ದ ಎನ್ನಲಾಗಿದೆ.
ವೃದ್ಧೆಯು ತನಗಾದ ಅವಮಾನದ ಬಗ್ಗೆ ವಿವರಿಸುತ್ತಾ ನ್ಯಾಯಕ್ಕೆ ಆಗ್ರಹಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಗಮನಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕಂಡಕ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿನ್ನೆಯಷ್ಟೇ ಮೀನುಗಾರ ಮಹಿಳೆ ಬಸ್ ಕಂಡಕ್ಟರ್ ಬಸ್ನಲ್ಲಿ ತನಗೆ ಮಾಡಿದ ಅವಮಾನ ಹಾಗೂ ಬಸ್ನಿಂದ ಇಳಿಯುವಂತೆ ದರ್ಪ ತೋರಿದ ಬಗ್ಗೆ ವಿವರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಸಾಮಾಜಿಕ ಕಾರ್ಯಕರ್ತರು ಕಂಡಕ್ಟರ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಘಟನೆಯ ಗಂಭೀರತೆಯನ್ನು ಅರಿತ ಕೊಲಾಚೆಲ್ ಸಾರಿಗೆ ನಿಗಮವು ಬಸ್ನ ಕಂಡಕ್ಟರ್ ಹಾಗೂ ಚಾಲಕನನ್ನು ಅಮಾನತುಗೊಳಿಸಿದೆ.