ತನ್ನ ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್ ಕಂಡ ತಮಿಳು ಗೀತರಚನೆಕಾರ ಗಾಬರಿ ಬಿದ್ದಿರುವ ಪ್ರಸಂಗ ನಡೆದಿದೆ. ತಮಿಳು ಗೀತರಚನೆಕಾರ ಕೋ ಶೇಷಾ ಅವರು ದಿ ಬೌಲ್ ಕಂಪನಿಯಿಂದ ಆರ್ಡರ್ ಮಾಡಿದ ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್ ತುಂಡುಗಳನ್ನು ಪತ್ತೆಯಾಗಿದೆ. ನಂತರ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಮಾಡಿದೆ ಎಂದು ಟೀಕಿಸಿದ್ದಾರೆ.
ತಮ್ಮ ಜೀವನದುದ್ದಕ್ಕೂ ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದ ಕೋ ಶೇಷಾ ಅವರು ಸರಣಿ ಟ್ವೀಟ್ಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆಹಾರವನ್ನು ಆರ್ಡರ್ ಮಾಡಿದ ಕ್ಲೌಡ್ ಕಿಚನ್ ಪ್ರತ್ಯೇಕವಾಗಿ ಸ್ವಿಗ್ಗಿ ಒಡೆತನದಲ್ಲಿದೆ.
ಶೇಷಾ ಅವರು ಸಸ್ಯಾಹಾರಿ ಪದಾರ್ಥಗಳನ್ನು ಆರ್ಡರ್ ಮಾಡಿದ್ದರು, ಗೋಬಿ ಮಂಚೂರಿ ಜೊತೆಗೆ ಕಾರ್ನ್ ಫ್ರೈಡ್ ರೈಸ್ ಒಳಗೊಂಡಿತ್ತು. ಆದರೆ, ಅವರು ತಮಗೆ ಸರ್ವ್ ಆದ ಆಹಾರ ಸೇವಿಸಲು ಮುಂದಾದಾಗ, ಚಿಕನ್ ತುಂಡುಗಳನ್ನು ಕಂಡುಕೊಂಡರು. ತಕ್ಷಣವೇ ಇದು ಅವರನ್ನು ಕೆರಳಿಸಿತಲ್ಲದೆ, ಟ್ವೀಟ್ನೊಂದಿಗೆ ತಾವು ತರಿಸಿಕೊಂಡ ತಿನಿಸಿನ ಫೋಟೋ ಪುರಾವೆಯನ್ನು ಲಗತ್ತಿಸಿದ್ದಾರೆ. ಹಾಗೆಯೇ ಈ ‘ಘೋರ ಪ್ರಮಾದ’ಕ್ಕಾಗಿ ಸ್ವಿಗ್ಗಿ ಅವರಿಗೆ ಕೇವಲ 70 ರೂಪಾಯಿಗಳ ಪರಿಹಾರವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.
ನಂತರದ ಟ್ವೀಟ್ನಲ್ಲಿ, “ನಾನು ನನ್ನ ಜೀವನದುದ್ದಕ್ಕೂ ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದೇನೆ, ಸ್ವಿಗ್ಗಿಯ ಪ್ರಮುಖ ಪ್ರತಿನಿಧಿಯೊಬ್ಬರು ವೈಯಕ್ತಿಕವಾಗಿ ಕರೆ ಮಾಡಿ ಕ್ಷಮೆಯಾಚಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಕಾನೂನು ಪರಿಹಾರಕ್ಕಾಗಿ ನನ್ನ ಹಕ್ಕುಗಳನ್ನು ಸಹ ಕಾಯ್ದಿರಿಸಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.
https://twitter.com/KoSesha/status/1559858039532003330