ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದಾಗಿನಿಂದ ಮಹಿಳೆಯರ ಮೇಲೆ ದಿನಕ್ಕೊಂದು ರೀತಿಯ ನಿಬಂಧನೆಗಳನ್ನು ವಿಧಿಸಲಾಗುತ್ತಲೇ ಇದೆ. ಕ್ರೀಡೆಯಿಂದ ಮಹಿಳೆಯರನ್ನು ಹೊರಗಿಟ್ಟ ಬೆನ್ನಲ್ಲೇ ಇದೀಗ ಮಹಿಳೆಯನ್ನು ತೋರಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಟಿವಿ ಚಾನೆಲ್ಗಳಿಗೆ ಸೂಚನೆ ನೀಡಲಾಗಿದೆ.
ಇದು ಮಾತ್ರವಲ್ಲದೇ ನ್ಯೂಸ್ ಚಾನೆಲ್ಗಳಲ್ಲಿ ಮಹಿಳಾ ಪತ್ರಕರ್ತರು ವರದಿ ನೀಡುವಾಗು ಹಿಜಾಬ್ಗಳನ್ನು ಧರಿಸುವುದು ಕಡ್ಡಾಯ ಎಂದೂ ತಾಲಿಬಾನ್ ಸಚಿವಾಲಯ ಸೂಚನೆ ನೀಡಿದೆ. ಹಾಗೂ ಪ್ರವಾದಿ ಮೊಹಮ್ಮದ್ ಅಥವಾ ಇಸ್ಲಾಂ ಧರ್ಮದ ಇತರೆ ಯಾವುದೇ ಗಣ್ಯ ವ್ಯಕ್ತಿಗಳನ್ನು ತೋರಿಸುವಂತಹ ಕಾರ್ಯಕ್ರಮ ಅಥವಾ ಸಿನಿಮಾಗಳನ್ನು ಪ್ರಸಾರ ಮಾಡಬೇಡಿ ಎಂದೂ ಹೇಳಲಾಗಿದೆ.
ಇಸ್ಲಾಂ ಧರ್ಮ ಹಾಗೂ ಅಫ್ಘನ್ನ ಘನತೆಗೆ ಧಕ್ಕೆ ತರುವಂತೆ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಗಳನ್ನು ಪ್ರಸಾರ ಮಾಡದಂತೆ ತಡೆ ಹೇರಲಾಗಿದೆ. ಇದು ಯಾವುದೂ ನಿಯಮಗಳಲ್ಲ ಆದರೆ ಧಾರ್ಮಿಕ ಮಾರ್ಗಸೂಚಿಯಾಗಿದೆ ಎಂದು ಸಚಿವಾಲಯದ ವಕ್ತಾರ ಹಕೀಫ್ ಮೊಹಜೀರ್ ಹೇಳಿದ್ದಾರೆ.
ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರಗಳ ಅಡಿಯಲ್ಲಿ 2 ದಶಕಗಳ ಕಾಲ ಸ್ವತಂತ್ರ್ಯ ಮಾಧ್ಯಮವನ್ನು ಹೊಂದಿದ್ದ ಅಫ್ಘಾನಿಸ್ತಾನಕ್ಕೆ ಇದೀಗ ಆಗಸ್ಟ್ 15ರಿಂದ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್ ಇಸ್ಲಾಂ ಧರ್ಮದ ಹೆಸರಿನಲ್ಲಿ ನಿಬಂಧನೆಗಳನ್ನು ಹೇರಿದಂತಾಗಿದೆ.