ಅಫ್ಘಾನಿಸ್ತಾನವನ್ನು ತಾಲಿಬಾನ್ ಈಗಾಗಲೇ ವಶಕ್ಕೆ ಪಡೆದಿದೆ. ಅನೇಕ ದಿನಗಳ ಚರ್ಚೆ, ಮಾತುಕತೆ ನಂತ್ರ ಕೊನೆಗೂ ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಮುಖ್ಯಸ್ಥನ ಆಯ್ಕೆ ಮಾಡಿದೆ. ತಾಲಿಬಾನ್ ಹಿರಿಯ ನಾಯಕ ಮುಲ್ಲಾ ಮೊಹಮ್ಮದ್ ಹಸನ್ ಅಖುಂಜದ್ ರನ್ನು ಅಫ್ಘಾನಿಸ್ತಾನದ ಹೊಸ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.
ಬುಧವಾರ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಇನ್ನೂ ಕೆಲ ದಿನ ವಿಳಂಬವಾಗುವ ಸಾಧ್ಯತೆಯೂ ಇದೆ ಎಂದು ತಾಲಿಬಾನ್ ನಾಯಕರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮುಲ್ಲಾ ಬರದಾರ್ ಅಖುಂಜದ್ ಮತ್ತು ಮುಲ್ಲಾ ಅಬ್ದುಸ್ ಸಲಾಮ್, ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಲ್ಲಾ ಮೊಹಮ್ಮದ್ ಹಸನ್ ಅಖುಂಜದ್, ಅವರ ನಾಮನಿರ್ದೇಶನವನ್ನು ಮೂವರು ತಾಲಿಬಾನ್ ನಾಯಕರು ಖಚಿತಪಡಿಸಿದ್ದಾರೆ. ಮುಲ್ಲಾ ಮೊಹಮ್ಮದ್ ಹಸನ್ ಅಖುಂಜದ್ ಪ್ರಸ್ತುತ ತಾಲಿಬಾನ್‌ನ ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ, ರೆಹಬಾರಿ ಶುರಾದ ಮುಖ್ಯಸ್ಥರಾಗಿದ್ದಾರೆ. ಈ ಸಂಸ್ಥೆ ಮುಖ್ಯಸ್ಥರಾಗಿ 20 ವರ್ಷ ಕೆಲಸ ಮಾಡಿದ್ದರು. ಮಿಲಿಟರಿ ಹಿನ್ನಲೆಗಿಂತ ಅವರು ಧಾರ್ಮಿಕ ಹಿನ್ನಲೆ ಹೊಂದಿದವರಾಗಿದ್ದಾರೆ.
ತಾಲಿಬಾನ್ ಮೂಲಗಳ ಪ್ರಕಾರ, ಮುಲ್ಲಾ ಅಮೀರ್ ಖಾನ್ ಮುತ್ತಕಿಯನ್ನು ಹೊಸ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿದೆ.