ಆಫ್ಘಾನಿಸ್ತಾನವನ್ನ ಆಕ್ರಮಿಸಿ ಇಸ್ಲಾಂ ಷರಿಯಾ ನಿಯಮ ಜಾರಿಗೊಳಿಸಿರುವ ತಾಲಿಬಾನ್ ಮಹಿಳೆಯರಿಂದ ಎಲ್ಲಾ ಸ್ವಾತಂತ್ರ್ಯಗಳನ್ನ ಕಸಿದುಕೊಂಡಿದೆ. ಈಗ ಮಹಿಳೆಯರನ್ನ ಕ್ರೀಡೆ ಕ್ಷೇತ್ರದಿಂದಲೂ ನಿಷೇಧಿಸಿದ್ದು, ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಮಹಿಳೆಯರಿಗಿದ್ದ ವಿಭಾಗಗಳನ್ನೆ ಬಂದ್ ಮಾಡಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಕಾಬೂಲ್ ನ ಹಲವಾರು ಕ್ರೀಡಾ ಕ್ಲಬ್ ಮಾಲೀಕರು ಮಾಹಿತಿ ನೀಡಿದ್ದು, ತಾಲಿಬಾನ್ ಮಹಿಳೆಯರನ್ನ ಅಥ್ಲೆಟಿಕ್ ಕ್ರೀಡೆಗಳಿಂದ ನಿಷೇಧಿಸಿದೆ ಎಂದು ಹೇಳಿದ್ದಾರೆ.
ಅಧಿಕಾರದ ಚುಕ್ಕಾಣಿ ಏರಿದ ಮೇಲೆ ತಾಲಿಬಾನಿಗಳು ಮಹಿಳೆಯರಿಗೆ ಕ್ರೀಡೆಗಳನ್ನ ಆಡಲು ಅನುಮತಿ ನೀಡುತ್ತಿಲ್ಲ. ಸ್ಪೋರ್ಟ್ಸ್ ಕ್ಲಬ್ ಗಳಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ವಿಭಾಗಗಳಿವೆ. ಈ ಮೊದಲು ಸಹ ಪ್ರತ್ಯೇಕ ವಿಭಾಗಗಳಲ್ಲೇ ಮಹಿಳೆಯರಿಗೆ, ಮಹಿಳಾ ಕೋಚ್ ಗಳು ತರಬೇತಿ ನೀಡುತ್ತಿದ್ದರು. ಆದರೂ ಈಗ ಕ್ರೀಡೆಗಳ ತರಬೇತಿಯಾಗಲಿ, ಪಾಲ್ಗೊಳ್ಳುವಿಕೆಗಾಗಲಿ ತಾಲಿಬಾನ್ ಅನುಮತಿಸುವುದಿಲ್ಲ ಎಂದು ಸ್ಪೋರ್ಟ್ಸ್ ಕ್ಲಬ್‌ನ ಮುಖ್ಯಸ್ಥ ಹಫೀಜುಲ್ಲಾ ಅಬಾಸಿ ತಿಳಿಸಿದ್ದಾರೆ.
ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ನನಗೆ ವ್ಯಾಯಾಮ ಮಾಡಲು ಅವಕಾಶವೇ ಸಿಕ್ಕಿಲ್ಲಾ. ನಾನು ತರಬೇತಿಗಾಗಿ ಹಲವು ಕ್ರೀಡಾ ಕ್ಲಬ್‌ಗಳನ್ನು ಸಂಪರ್ಕಿಸಿದೆ ಆದರೆ, ದುರದೃಷ್ಟವಶಾತ್ ಮಹಿಳಾ ವಿಭಾಗವನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು” ಎಂದು ಟೈಕಾಂಡೋ ಮತ್ತು ಪರ್ವತಾರೋಹಣದ ಕೋಚ್ ತಾಹಿರಾ ಸುಲ್ತಾನಿ ಹೇಳಿದರು.
ಆಕೆ ಹಲವಾರು ಪ್ರಶಸ್ತಿಗಳನ್ನ ಗೆದ್ದಿದ್ದಾಳೆ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಳು. ಕಳೆದ ಆರು ವರ್ಷಗಳಿಂದ ನನಗೆ ಆಕೆಯ ಪ್ರತಿಭೆ ಮೇಲೆ ಸಾಕಷ್ಟು ಆಸೆ ಮತ್ತು ಮಹತ್ವಾಕಾಂಕ್ಷೆ ಇತ್ತು. ಆಕೆ ಕ್ರೀಡೆಯಲ್ಲಿ ಸಾಧಿಸಿ, ವಿಶ್ವದಲ್ಲಿ ಅಫ್ಘಾನಿಸ್ತಾನದ ಧ್ವಜವನ್ನು ಹಾರಿಸಬೇಕು ಎಂದು ಕನಸು ಕಂಡಿದ್ದೆ. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಹಳೆಯ ಮಹಿಳಾ ಕ್ರೀಡಾಪಟುವನ್ನ ನೆನೆಸಿಕೊಳ್ಳುತ್ತಾ, ರಾಷ್ಟ್ರೀಯ ಜುಜುಟ್ಸು ತಂಡದ ಸದಸ್ಯ ಅರಿಜೊ ಅಹ್ಮದಿ ಹೇಳಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ನಾವು ಎಲ್ಲಾ ಅಂಶಗಳಲ್ಲಿ ಇಸ್ಲಾಮಿಕ್ ಎಮಿರೇಟ್‌ನ ನೀತಿಯನ್ನು ಅನುಸರಿಸುತ್ತೇವೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಯಾವುದನ್ನು ಅನುಮತಿಸಲಾಗಿದೆಯೋ ಅದನ್ನು ನಾವು ಅನುಮತಿಸುತ್ತೇವೆ” ಎಂದು ದೈಹಿಕ ಶಿಕ್ಷಣ ಮತ್ತು ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಕ್ತಾರ ದಾದ್ ಮೊಹಮ್ಮದ್ ನವಾ ಹೇಳಿದ್ದಾರೆ. ಪ್ರಸ್ತುತ ಸರ್ಕಾರ ಕ್ರೀಡೆಯಿಂದ ಮಹಿಳೆಯರನ್ನ ನಿಷೇಧಿಸಿರುವುದನ್ನ ಹಲವು ಅಂತರಾಷ್ಟ್ರೀಯ ಮಾನವೀಯ ಸಂಸ್ಥೆಗಳು ಟೀಕಿಸಿವೆ ಎಂದು ವರದಿಯಾಗಿದೆ.