ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು, ಕಾಬೂಲ್ ನಿವಾಸಿಗಳ ಬಳಿ ಸರ್ಕಾರದ ವಾಹನಗಳು, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ವಾರದೊಳಗಾಗಿ ಅದನ್ನು ವಾಪಸ್ ನೀಡುವಂತೆ ತಾಕೀತು ಮಾಡಿದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಕಾಬೂಲ್ನಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡು ಹಾಗೂ ಇತರೆ ಸರ್ಕಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಿಂದಿರುಗಿಸಬೇಕು. ವಾರದೊಳಗೆ ಸರ್ಕಾರಿ ವಸ್ತುಗಳನ್ನು ಹಿಂದಿರುಗಿಸದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಕೆಡವಿದ ಬಳಿಕ ತಾಲಿಬಾನಿಗಳ ಪಾರುಪತ್ಯಕ್ಕೆ ಅಫ್ಘನ್ ಜನತೆ ನಲುಗಿ ಹೋಗಿದ್ದಾರೆ. ಮಹಿಳೆಯರ ಮೇಲಿನ ದಬ್ಬಾಳಿಕೆ, ಬಾಂಬ್ ಸ್ಪೋಟ, ಹಿಂಸಾಚಾರ, ಕೊಲೆ ಹೀಗೆ ಒಂದಿಲ್ಲೊಂದು ಕರುಣಾಜನಕ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ.