ಬರೋಬ್ಬರಿ ಒಂದು ವರ್ಷಗಳ ಬಳಿಕ ಪ್ರವಾಸಿಗರಿಗೆ ರಾತ್ರಿ ಸಮಯದಲ್ಲಿ ತಾಜ್ ಮಹಲ್ನ್ನು ಕಣ್ತುಂಬಿಕೊಳ್ಳಬಹುದಾದ ಸದಾವಕಾಶ ಮತ್ತೆ ಕೂಡಿ ಬಂದಿದೆ. ಶನಿವಾರದಿಂದ ಪ್ರವಾಸಿಗರಿಗೆ ರಾತ್ರಿ ವೇಳೆ ತಾಜ್ಮಹಲ್ ವೀಕ್ಷಣೆಗೆ ಅವಕಾಶ ನೀಡೋದಾಗಿ ಆಡಳಿತ ಮಂಡಳಿ ಹೇಳಿದೆ. ಕೋವಿಡ್ 19 ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಅಂದರೆ ಕಳೆದ ವರ್ಷ ಮಾರ್ಚ್ 17ರಿಂದ ರಾತ್ರಿ ತಾಜ್ ಮಹಲ್ ವೀಕ್ಷಣೆಗೆ ಬ್ರೇಕ್ ಹಾಕಲಾಗಿತ್ತು.
ರಾತ್ರಿ ತಾಜ್ ಮಹಲ್ ವೀಕ್ಷಣೆ ಮಾಡಲು ಆಗಸ್ಟ್ 21, 22 ಹಾಗೂ 24ರಂದು ಅವಕಾಶ ನೀಡಲಾಗಿದೆ. ಶುಕ್ರವಾರದಂದು ತಾಜ್ಮಹಲ್ ಎಂದಿನಂತೆ ಬಂದ್ ಇರಲಿದೆ. ಭಾನುವಾರ ವೀಕೆಂಡ್ ಲಾಕ್ಡೌನ್ ಜಾರಿಯಲ್ಲಿ ಇರಲಿದೆ.
ತಾಜ್ ಮಹಲ್ ರಾತ್ರಿ ವೀಕ್ಷಣೆ ಮಾಡುವರಿಗೆ ರಾತ್ರಿ 8:30ರಿಂದ 9 ಗಂಟೆ ಹಾಗೂ 9:30ರಿಂದ 10 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ. ಪ್ರತಿ ಸ್ಲಾಟ್ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇವಲ 50 ಮಂದಿ ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದೆ ಎಂದು ಎಎಸ್ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ವಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ರಾತ್ರಿ ವೇಳೆ ತಾಜ್ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇಚ್ಚಿಸುವವರು ಆಗ್ರಾದ 22 ಮಾಲ್ ರೋಡ್ನಲ್ಲಿರುವ ಎಎಸ್ಐ ಕಚೇರಿ ಕೌಂಟರ್ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಕುಮಾರ್ ಹೇಳಿದ್ದಾರೆ.