
ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರದಲ್ಲಿ ಅನುಮಾನಾಸ್ಪದ ವಿದೇಶಿ ಬೋಟ್ ಪತ್ತೆಯಾಗಿದೆ. ಮಲ್ಪೆಯ ಸೈಂತ್ ಮರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿ ಕಾ ಬೋಟ್ ಪತ್ತೆಯಾಗಿದ್ದು, ಕೋಸ್ಟ್ ಗಾರ್ಡ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಬೋಟ್ ನಲ್ಲಿ ತಮಿಳುನಾಡು ಮೂಲದ ಮೀನುಗಾರರ ತಂಡ ಪತ್ತೆಯಾಗಿದ್ದು, ಓಮನ್ ಬೋಟ್ ಮಾಲೀಕ ಮೀನುಗಾರರಿಗೆ ವೇತನ ಹಾಗೂ ಆಹಾರವನ್ನು ನೀಡದೇ ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದ ನೊಂದವರು ತಪ್ಪಿಸಿಕೊಂಡು ಓಮನ್ ಹಾರ್ಬರ್ ನಿಂದ ಬಂದಿದ್ದಾರೆ ಎನ್ನಲಾಗಿದೆ.
ಸಮುದ್ರ ಮಾರ್ಗದಲ್ಲಿ ನಾಲ್ಕು ಸಾವಿರ ಕಿ.ಮೀ ಕ್ರಮಿಸಿ ಭಾರತದ ಸಮುದ್ರ ಪ್ರವೇಶಿಸಿದ್ದಾರೆ. ಓಮನ್ ಹಡಗು ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣಿಸುತ್ತಿದ್ದ ವೇಳೆ ಡೀಸೆಲ್ ಖಾಲಿಯಾಗಿ ಹಣ, ಆಹಾರವೂ ಇಲ್ಲದೇ ಬೋಟ್ ನಲ್ಲಿದ್ದವರು ಪರದಾಡುತ್ತಿದ್ದರು. ಈ ವೇಳೆ ಮಲ್ಪೆ ಕಡಲ ತೀರದಲ್ಲಿ ಸ್ಥಳೀಯ ಮೀನುಗಾರರಿಗೆ ಈ ಹಡಗು ಪತ್ತೆಯಗೈದ್ದು, ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಕೋಸ್ಟ್ ಗಾರ್ಡ್ ವಿದೇಶಿ ಹಡಗು ಹಾಗೂ ತಮಿಳುನಾಡು ಮೂಲದ ಮೀನುಗಾರರ ತಂಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.