ಮುಂಬೈ: 2020ರ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮುಂಬೈನ ಬಾಂದ್ರಾದಲ್ಲಿ ಅವರು ಬಾಡಿಗೆಗೆ ಇದ್ದ ಐಷಾರಾಮಿ ಅಪಾರ್ಟ್ಮೆಂಟ್ಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ. ಈ ಮನೆಗೆ ಕಾಲಿಡಲು ಜನರು ಹೆದರುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬರು ಬಹಿರಂಗಪಡಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡರೋ ಇಲ್ಲವೇ ಅವರ ಕೊಲೆಯಾಗಿದೆಯೋ ತಿಳಿಯದು. ಆದರೆ ಜನರು ಮಾತ್ರ ಇಲ್ಲಿ ಬರಲು ಹೆದರುತ್ತಿದ್ದಾರೆ ಎನ್ನುತ್ತಿದ್ದಾರೆ ಬ್ರೋಕರ್. ಈ ಅಪಾರ್ಟ್ಮೆಂಟ್ ಮಾಲೀಕರು ಓರ್ವ ಎನ್ಆರ್ಐ. ಅವರು ಮುಂಬೈನಲ್ಲಿ ಇರುವುದಿಲ್ಲ. ಈ ಫ್ಲಾಟ್ಗೆ ಅವರು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಬಾಡಿಗೆ ಕಡಿಮೆ ಮಾಡಲು ಮಾಲೀಕರು ಸಿದ್ಧರಿಲ್ಲ. ಇದೇ ಬೆಲೆಗೆ ಅಕ್ಕ-ಪಕ್ಕದ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಸಿಗುತ್ತಿರುವಾಗ ಇದಕ್ಕೆ ಏಕೆ ಬರಬೇಕು ಎನ್ನುವುದು ಅನೇಕರ ಪ್ರಶ್ನೆ.
ಇದು ನಾಲ್ಕು ಬೆಡ್ ರೂಮ್ ಇರುವ ಫ್ಲಾಟ್. ಕೆಲವು ಸ್ಟಾರ್ ಸೆಲೆಬ್ರಿಟಿಗಳು ಈ ಫ್ಲಾಟ್ ಅನ್ನು ಬಾಡಿಗೆಗೆ ಖರೀದಿಸಲು ಉತ್ಸುಕರಾಗಿದ್ದರೂ, ಸಿನಿಮಾ ಸೆಲೆಬ್ರಿಟಿಗಳಿಗೆ ಮನೆ ನೀಡಬಾರದು ಎಂದು ಮಾಲೀಕರು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.