ಮಳೆಗಾಲ ಆರಂಭವಾಗಿ ಹಲವು ದಿನಗಳೇ ಕಳೆದಿದೆ. ಈ ಸಂದರ್ಭದಲ್ಲಿ ಸೊಳ್ಳೆಗಳ ಕಾಟ ತುಸು ಹೆಚ್ಚಾಗಿಯೇ ಇರುತ್ತದೆ. ಗಾತ್ರದಲ್ಲಿ ಸಣ್ಣದಾಗಿದ್ದರೂ ಸಹ ಈ ಸೊಳ್ಳೆ ಕೊಡೋ ಕಾಟ ಯಮಯಾತನೆಯೇ ಸರಿ.
ಸೊಳ್ಳೆ ಕಚ್ಚಿದ ಉರಿ ಒಂದೆಡೆಯಾದರೆ ಆಮೇಲೆ ತುರಿಸಿದಂತ ಅನುಭವ ಕೂಡ ಇನ್ನಷ್ಟು ಕಿರಿಕಿರಿ ಎನಿಸುತ್ತದೆ.
ಆದರೆ ಈ ಸೊಳ್ಳೆಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಕಚ್ಚೋದಿಲ್ಲ. ಕೆಲವೊಂದಿಷ್ಟು ಜನರಿಗೆ ಸೊಳ್ಳೆ ಕಾಟ ಎಲ್ಲರಿಗಿಂತ ಜಾಸ್ತಿ ಇರುತ್ತೆ ಅನ್ನೋದನ್ನ ನೀವು ಕೇಳಿರ್ತೀರಾ. ಹಾಗಾದ್ರೆ ಸೊಳ್ಳೆ ತಾನು ಕಚ್ಚುವ ವ್ಯಕ್ತಿಯನ್ನೂ ಆಯ್ಕೆ ಮಾಡಿಕೊಳ್ಳುತ್ತಾ..? ಸೊಳ್ಳೆ ಕೇವಲ ಕೆಲವೇ ವ್ಯಕ್ತಿಗಳನ್ನ ಮಾತ್ರ ಟಾರ್ಗೆಟ್ ಮಾಡುತ್ತಾ..? ಹೌದು ಎಂದಾದರೆ ಇದಕ್ಕೆ ಕಾರಣವೇನು..? ಇಲ್ಲಿದೆ ಉತ್ತರ….
ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ ಸೊಳ್ಳೆಗಳು ಕೆಲವರಿಗೆ ತುಸು ಜಾಸ್ತಿಯೇ ಕಚ್ಚುತ್ತವೆ. 2014ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಒ ರಕ್ತ ಕಣವನ್ನ ಹೊಂದಿರುವವರಿಗೆ ಸೊಳ್ಳೆಗಳ ಕಾಟ ಜಾಸ್ತಿ ಎಂಬ ವರದಿ ನೀಡಲಾಗಿತ್ತು.
ಫ್ಲೋರಿಡಾ ವಿಶ್ವವಿದ್ಯಾಲಯದ ಸೊಳ್ಳೆಗಳ ತಜ್ಞ ಹಾಗೂ ವೈದ್ಯಕೀಯ ಕೀಟಶಾಸ್ತ್ರಜ್ಞ ಡಾ. ಜೋನಾಥನ್ ಡೇ ನೀಡಿರುವ ಮಾಹಿತಿಯ ಪ್ರಕಾರ ಸೊಳ್ಳೆಗಳು 0 ರಕ್ತ ಕಣದವರಿಗೆ ಹೆಚ್ಚಾಗಿ ಕಚ್ಚುತವೆ ಎನ್ನಲಾಗಿದೆ. ಇದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನೂ ಜೋನಾಥನ್ ಪ್ರಕಟಿಸಿದ್ದಾರೆ.
ಡಾ. ಜೋನಾಥನ್ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಚರ್ಮದಲ್ಲಿ ಸಾಕಷ್ಟು ರಾಸಾಯನಿಕಗಳು ರಹಸ್ಯವಾಗಿ ಇರುತ್ತವೆ. ಇದರಲ್ಲಿ ಲ್ಯಾಕ್ಟಿಕ್ ಆ್ಯಸಿಡ್ನಂತಹ ರಾಸಾಯನಿಕ ಸೊಳ್ಳೆಗಳನ್ನ ಹೆಚ್ಚು ಆಕರ್ಷಿಸುತ್ತದೆ. ಇಂತಹ ರಾಸಾಯನಿಕಗಳು ಹೆಚ್ಚೆಚ್ಚು ಉತ್ಪತ್ತಿ ಮಾಡುವ ಚರ್ಮವನ್ನ ಹೊಂದಿರುವವರು ಸೊಳ್ಳೆಗಳ ಕಾಟಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ ಎಂದು ತಿಳಿದುಬಂದಿದೆ.