ಒಡಿಶಾದ ಗಂಜಾಂ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ತೆಲುಗಿನ ಬ್ಲಾಕ್ಬಸ್ಟರ್ ಸಿನಿಮಾ ‘ಪುಷ್ಪಾ’ ಹಾಡಿಗೆ ಕೆಲವು ವಿದ್ಯಾರ್ಥಿಗಳು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪರಿಣಾಮ, ಆ ಶಾಲೆಯ ಪ್ರಾಂಶುಪಾಲರು ಅಮಾನತಾಗಿದ್ದಾರೆ.
ಶೇರಗಡ ಬ್ಲಾಕ್ನಲ್ಲಿರುವ ಬಾರಾಮುಂಡಲಿ ಪ್ರೌಢಶಾಲೆಯ ಸ್ಮಾರ್ಟ್ ತರಗತಿಯಲ್ಲಿ 10ನೇ ತರಗತಿ ಪರೀಕ್ಷೆಗೆ ಸಂಬಂಧಿಸಿ ಶಿಕ್ಷಕರು ಕೆಲವು ಟಿಪ್ಸ್ ನೀಡುವುದಕ್ಕಾಗಿ ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ಅದು ಮುಗಿದ ಬಳಿಕ ಅವರು ಕೊಠಡಿಗೆ ಬೀಗ ಹಾಕದೆ ತೆರಳಿದ್ದರು. ಕೊಠಡಿಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ ಅನ್ನು ಸ್ಮಾರ್ಟ್ಕ್ಲಾಸ್ನಲ್ಲಿದ್ದ ಟಿವಿಗೆ ಲಿಂಕ್ ಮಾಡಿ ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದರು.
ನೆಟ್ಟಿಗರು ತಲೆಕೆರೆದುಕೊಳ್ಳುವಂತೆ ಮಾಡಿದೆ ಫುಟ್ಬಾಲ್ ಆಟಗಾರರ ಆಪ್ಟಿಕಲ್ ಇಲ್ಯೂಷನ್ ಫೋಟೋ..!
ಈ ನೃತ್ಯದ 14 ಮತ್ತು 24 ಸೆಕೆಂಡುಗಳ ಅವಧಿಯ ಎರಡು ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದವು. ಅಲ್ಲು ಅರ್ಜುನ್ ಅಭಿನಯದ ಜನಪ್ರಿಯ ಗೀತೆಯಾದ ‘ಶ್ರೀವಲ್ಲಿ’ ಟ್ಯೂನ್ಗಳಿಗೆ ನೃತ್ಯ ಮಾಡಿದ ದೃಶ್ಯಗಳು ಅದರಲ್ಲಿದ್ದವು. ಈ ಕುರಿತು ವಿವರಣೆ ನೀಡುವಂತೆ ಮುಖ್ಯ ಶಿಕ್ಷಕಿ ಸುಜಾತಾ ಪಾಧಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರೂ ಅವರು ತೃಪ್ತಿಕರವಾಗಿ ಉತ್ತರಿಸಿಲ್ಲ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಭಾಸ್ಕರ್ ಲೆಂಕಾ ಹೇಳಿದ್ದಾರೆ.
ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಸುಜಾತಾ ಪಾಧಿ ಅವರನ್ನು ಬುಧವಾರದಿಂದ ಸೇವೆಯಿಂದ ಅಮಾನತುಗೊಳಿಸಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಕರ್ತವ್ಯ ಲೋಪವೆಸಗಿರುವ ಇನ್ನೂ ಕೆಲವು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಬಿನಿತಾ ಸೇನಾಪತಿ ತಿಳಿಸಿದ್ದಾರೆ.