alex Certify BIG NEWS: ರಾಜ್ಯದಲ್ಲಿ ಕೊರೋನಾ ತಡೆಗೆ ಮತ್ತೆ ಟಫ್ ರೂಲ್ಸ್ ಜಾರಿ: ಉಲ್ಲಂಘಿಸಿದ್ರೆ ಕಠಿಣ ಕ್ರಮ -ಇಲ್ಲಿದೆ ಡೀಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಕೊರೋನಾ ತಡೆಗೆ ಮತ್ತೆ ಟಫ್ ರೂಲ್ಸ್ ಜಾರಿ: ಉಲ್ಲಂಘಿಸಿದ್ರೆ ಕಠಿಣ ಕ್ರಮ -ಇಲ್ಲಿದೆ ಡೀಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ.

ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11, 12 ನೇ ತರಗತಿಗಳು ಪ್ರಸ್ತುತವಿರುವಂತೆಯೇ ಮುಂದುವರೆಯುತ್ತದೆ. ಆದರೆ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ.

ವಸತಿ ಶಾಲೆಗಳು ಬೋರ್ಡಿಂಗ್ ಶಾಲೆಗಳಲ್ಲಿ 10, 11 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸುಗಳ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯುವವರು, ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದರೆ, ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ.

ಅಪಾರ್ಟ್ಮೆಂಟ್, ಕಾಂಪ್ಲೆಕ್ಸ್ ಗಳಲ್ಲಿ ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್, ಪಾರ್ಟಿ ಹಾಲ್, ಕ್ಲಬ್ ಗಳು, ಈಜುಕೊಳಗಳು ಮೊದಲಾದವು ಮುಚ್ಚಲ್ಪಟ್ಟಿರುತ್ತವೆ.

ಯಾವುದೇ ತರಹದ ರ್ಯಾಲಿ, ಮುಷ್ಕರ, ಧರಣಿ ಮೊದಲಾದವುಗಳನ್ನು ನಿಷೇಧಿಸಲಾಗಿದೆ.

ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ನಿಗದಿಪಡಿಸಿದ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ.

ಕಚೇರಿಗಳು ಹಾಗೂ ಇತರೆ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಪಾಲಿಸುವುದು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ಸೇರಿದಂತೆ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳ ಸಿನಿಮಾ ಹಾಲ್ ಗಳಲ್ಲಿ ಪರ್ಯಾಯ ಆಸನಗಳಲ್ಲಿ ಕೂರುವಂತೆ ಒಂದು ಬಿಟ್ಟು ಮತ್ತೊಂದು ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ಗರಿಷ್ಠ ಶೇಕಡ 50 ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸುವುದು.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಿಬಿಎಂಪಿ ಸೇರಿದಂತೆ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಾರ್, ರೆಸ್ಟೋರೆಂಟ್ ಗಳು ಗರಿಷ್ಠ ಸಂಖ್ಯೆಯನ್ನು ಮೀರುವಂತಿಲ್ಲ.

ಕೋವಿಡ್ ಮುನ್ನೆಚ್ಚರಿಕೆ ಸೂಕ್ತ ವರ್ತನೆಗಳನ್ನು ಕಡ್ಡಾಯವಾಗಿ ಮಾಸ್ಕ್, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್ ಗಳ ಬಳಕೆಯನ್ನು ಜಾರಿಗೊಳಿಸುವುದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ರೆಸ್ಟೋರೆಂಟ್ ಗಳನ್ನು ಸಾಂಕ್ರಾಮಿಕ ಪರಿಸ್ಥಿತಿ ಕೊನೆಯಾಗುವವರೆಗೆ ಮುಚ್ಚಲಾಗುವುದು.

ಶಾಪಿಂಗ್ ಮಾಲ್ ಗಳು ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್ ಗಳು, ಡಿಪಾರ್ಟ್ಮೆಂಟ್ ಸ್ಟೋರ್ ಗಳಲ್ಲಿ ಶಿಷ್ಟಾಚಾರದ ಅನ್ವಯ ಮುನ್ನೆಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಅಂದರೆ ಕಡ್ಡಾಯವಾಗಿ ಮಾಸ್ಕ್, ದೈಹಿಕ ಅಂತರ ಪಾಲನೆ, ಹ್ಯಾಂಡ್ ವಾಷ್, ಸ್ಯಾನಿಟೈಸರ್ ಬಳಕೆಯನ್ನು ಜಾರಿಗೊಳಿಸುವುದು. ನಿಯಮ ಉಲ್ಲಂಘಿಸಿದಲ್ಲಿ ಪರಿಸ್ಥಿತಿ ಕೊನೆಯಾಗುವವರೆಗೆ ಮುಚ್ಚಲಾಗುವುದು.

ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಮತ್ತು ಜಾತ್ರಾ ಮಹೋತ್ಸವಗಳು ಮೇಳಗಳು ಗುಂಪು ಸೇರುವುದರ ನಿಷೇಧ ಮುಂದುವರೆಯಲಿದೆ.

ವಿವಿಧ ಸಭೆ-ಸಮಾರಂಭ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಿತಿಗೊಳಿಸಿ ನಿರ್ಬಂಧಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಇವುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಯಲ್ಲಿರುವ ನಿಯಮ ಆದೇಶಗಳನ್ನು ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.

ನಿಯಮಗಳನ್ನು ಯಾವುದೇ ವ್ಯಕ್ತಿ, ವ್ಯಕ್ತಿಗಳು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು. ಈ ನಿಯಮಗಳು, ನಿರ್ಬಂಧಗಳು ಏಪ್ರಿಲ್ 20 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...