ಉಡುಪಿ: ಪೂರ್ವ ಮುಂಗಾರು ಮಳೆ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ವರುಣಾರ್ಭಟ ಜೋರಾಗಿದೆ. ಇದೇ ವೇಳೆ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.
ಪ್ರಮುಖವಾಗಿ ಉಡುಪಿಯ ಮಲ್ಪೆ ಬಳಿಯ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ನಿಷೇಧ ಹೇರಿದೆ. ಮುಂದಿನ 4 ತಿಂಗಳ ಕಾಲ ಸೇಂಟ್ ಮೇರಿಸ್ ದ್ವೀಪಕ್ಕೆ ಯಾವುದೇ ದೋಣಿ, ಬೋಟ್ ಗಳು ಹೋಗುವಂತಿಲ್ಲ, ಪ್ರವಾಸಿಗರಿಗೆ ವಿಹಾರಕ್ಕೂ ಅವಕಾಶವಿಲ್ಲ. ಇದರಿಂದಾಗಿ ಪ್ರವಾಸಿಗರಿಗೆ ನಿರಾಸೆಯಾಗಿದೆ.
ಸೇಂಟ್ ಮೇರಿಸ್ ದ್ವೀಪ ವಿಭಿನ್ನ ಆಕಾರಗಳ ಬಂಡೆಗಳಿಗೆ ಜನಪ್ರಿಯ. ಇದೇ ಕಾರಣಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಈ ದ್ವೀಪಕ್ಕೆ ಆಗಮಿಸಿ ಇಲ್ಲಿನ ಬಂಡೆಗಳ ಮಧ್ಯೆ ಫೋಟೋ ಶೂಟ್ ಮಾಡಿಸುತ್ತಾರೆ. ಉಡುಪಿಗೆ ಆಗಮಿಸುವ ಬಹುತೇಕರು ಇಲ್ಲಿನ ದ್ವೀಪ ತಾಣಕ್ಕೆ ಭೇಟಿ ಕೊಡುತ್ತಾರೆ.
ಮಳೆಗಾಲದ ವೇಳೆ ದ್ವೀಪದ ಬಂಡೆಗಳಲ್ಲಿ ಪಾಚಿ ಕಟ್ಟುವುದರಿಂದ ಇವು ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಇನ್ನು ದ್ವೀಪದಲ್ಲಿ ವಿವಿಧ ಬಗೆಯ ಮನರಂಜನಾ ಕ್ರೀಡೆಗಳನ್ನು ನಿಷೇಧಿಸಲಾಗಿದೆ. ಸೇಂಟ್ ಮೇರಿಸ್ ಪಿಕ್ ಪಾಯಿಂಟ್ ನಲ್ಲಿ ವ್ಯಾಪಾರ ವಹಿವಾಟು ಕೂಡ ಸ್ತಬ್ಧಗೊಂಡಿದೆ.
ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾಗಿರುವ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ವಿಧದ ಪ್ರವಾಸಿ ಬೋಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ.