ಬಳ್ಳಾರಿ: ಬಳ್ಳಾರಿ ತಾಲೂಕಿನ ಬೈರದೇವನಹಳ್ಳಿ ಸಮೀಪ ಎಲ್.ಸಿ. ಕಾಲುವೆ ಪಿಲ್ಲರ್ ದುರಸ್ತಿ ಕಾಮಗಾರಿ ವಿಳಂಬ ವಿರೋಧಿಸಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಥಳದಲ್ಲೇ ಹಾಸಿಗೆ ಸಮೇತ ಧರಣಿ ನಡೆಸಿದ್ದಾರೆ.
ರಾತ್ರಿ ಇಡೀ ಧರಣಿ ನಡೆಸಿದ ಸಚಿವ ಶ್ರೀರಾಮುಲು ಎಲ್.ಸಿ. ಕಾಲುವೆಯ ಪಿಲ್ಲರ್ ದುರಸ್ತಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿವರೆಗೂ ಧರಣಿ ನಡೆಸಿದ್ದಾರೆ.
ಅ. 13 ರಂದು ವೇದಾವತಿ ನದಿಗೆ ನಿರ್ಮಿಸಿದ ಸೇತುವೆಯ ಪಿಲ್ಲರ್ ಕೊಚ್ಚಿ ಹೋಗಿದ್ದು, ಮತ್ತೆರಡು ಪಿಲ್ಲರ್ ಗಳು ಶಿಥಿಲಗೊಂಡಿದ್ದವು. ಕಾಲುವೆ ನೀರು ಸ್ಥಗಿತಗೊಳಿಸಿ ದುರಸ್ತಿ ಕಾರ್ಯಕೈಗೊಳ್ಳಲಾಗಿದ್ದು, ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು, 20 ದಿನಗಳಿಂದ ನೀರಿಲ್ಲದೇ, ರೈತರ ಬೆಳೆ ಒಣಗಲಾರಂಭಿಸಿವೆ. ಹೀಗಾಗಿ ಸಚಿವ ಶ್ರೀರಾಮುಲು ಧರಣಿ ನಡೆಸಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರುಹರಿಸಬೇಕೆಂದು ಹೇಳಿದ್ದಾರೆ.