ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ತಾನು ಒಂದೇ ಬಾರಿಗೆ ಬರೋಬ್ಬರಿ 10 ಕಂದಮ್ಮಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಒಂದು ವೇಳೆ ಈಕೆ ನೀಡಿರುವ ಹೇಳಿಕೆ ನಿಜವೆಂದು ಸಾಬೀತಾದಲ್ಲಿ ಈ ಮಹಾತಾಯಿಯ ಹೆಸರು ವಿಶ್ವ ದಾಖಲೆಯ ಪಟ್ಟಿಯಲ್ಲಿ ನಮೂದಾಗಲಿದೆ.
ಸದ್ಯ ಅತೀ ಹೆಚ್ಚು ಮಕ್ಕಳಿಗೆ ಒಂದೇ ಬಾರಿಗೆ ಜನ್ಮ ನೀಡಿರುವವರ ಪಟ್ಟಿಯಲ್ಲಿ ಪಶ್ಚಿಮ ಆಫ್ರಿಕಾದ ಮಾಲಿಯ ಹಲೀಮಾ ಸಿಸ್ಸೆ ಎಂಬವರ ಹೆಸರಿದೆ. ಇವರು ಮೇ ತಿಂಗಳಲ್ಲಿ ಮೊರೊಕ್ಕೋ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ್ದರು.
9 ಮಕ್ಕಳಿಗೆ ಜನ್ಮ ನೀಡಿ ಹಲೀಮಾ ಗಿನ್ನೆಸ್ ವಿಶ್ವ ದಾಖಲೆಯನ್ನ ನಿರ್ಮಿಸಿದ್ದರೆ ಜೂನ್ 7ರಂದು ತಾನು ಒಂದೇ ಬಾರಿಗೆ 10 ಮಕ್ಕಳನ್ನ ಹೆತ್ತಿದ್ದೇನೆ ಎಂದು ಹೇಳಿಕೊಳ್ತಿರುವ 37 ವರ್ಷದ ಗೋಸಿಯಮ್ ತಮಾರಾ ಹಲೀಮಾರ ದಾಖಲೆಯನ್ನ ಮುರಿಯೋಕೆ ಮುಂದಾಗಿದ್ದಾರೆ.
ಈ ಹಿಂದೆ ಅವಳಿ ಮಕ್ಕಳ ತಾಯಿಯಾಗಿದ್ದ ತಮಾರಾ ಸೋಮವಾರ 7 ಗಂಡು ಹಾಗೂ ಮೂವರು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಗೂ ಮುನ್ನ ತಮಾರಾ ತಮಗೆ ಆರು ಮಗು ಜನಿಸಬಹುದು ಎಂದೇ ಭಾವಿಸಿದ್ದರಂತೆ.