ಬಿಜೆಪಿ ನಾಯಕಿ ಮತ್ತು ಬಿಗ್ ಬಾಸ್ ತಾರೆ ಸೋನಾಲಿ ಪೋಗಟ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆಕೆಯ ಸಹೋದರ ರಿಂಕು ಧಾಕಾ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.
ಗೋವಾದಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆಪಾದಿದ್ದು, ಆಕೆಯ ಇಬ್ಬರು ಆಪ್ತ ಸಹಾಯಕರಾದ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಭಾಗಿಗಳು ಎಂದು ಹೇಳಿದ್ದಾರೆ.
ಸೋನಾಲಿ ಪೋಗಟ್ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಗೋವಾ ಪೊಲೀಸರು ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ ನಂತರ ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಕ್ಟಾಕ್ನಲ್ಲಿ ಖ್ಯಾತಿ ಪಡೆದ ಹರಿಯಾಣದ ಹಿಸಾರ್ನ ಬಿಜೆಪಿ ನಾಯಕಿ 42 ವರ್ಷದ ಸೋನಾಲಿ ಪೋಗಟ್ ಮಂಗಳವಾರ ಬೆಳಿಗ್ಗೆ ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬಳಿಕ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಫೋರೆನ್ಸಿಕ್ ತಜ್ಞರ ತಂಡವು ಇಲ್ಲಿಗೆ ಸಮೀಪದ ಬಾಂಬೋಲಿಮ್ನಲ್ಲಿರುವ ಗೋವಾ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗುರುವಾರ ಶವಪರೀಕ್ಷೆ ನಡೆಸಿತು.
ನಂತರ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೋಗಟ್ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಸ್ಪಾಲ್ ಸಿಂಗ್ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.
ಪೋಗಟ್ ಸಹೋದರ ರಿಂಕು ಢಾಕಾ ಬುಧವಾರ ಆಕೆಯನ್ನು ಆಕೆಯ ಇಬ್ಬರು ಸಹಚರರು ಕೊಲೆ ಮಾಡಿದ್ದಾರೆ. ಆ ಇಬ್ಬರು ವ್ಯಕ್ತಿಗಳ ವಿರುದ್ಧ ಗೋವಾ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ ನಂತರವೇ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಾಗಿ ಹೇಳಿದ್ದರು.
ಮರಣೋತ್ತರ ಪರೀಕ್ಷೆ ಪೂರ್ಣ ವಿಡಿಯೋ ಮಾಡಿದ ನಂತರ ದೂರಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.