ತಮ್ಮ ಮಕ್ಕಳಿಗಾಗಿ ಪಾಲಕರು ಅದರಲ್ಲಿಯೂ ಅಮ್ಮ ಆದಾಕೆ ತನ್ನೆಲ್ಲಾ ನೋವು, ಕಷ್ಟಗಳನ್ನು ಬದಿಗಿಟ್ಟು ಲಾಲನೆ, ಪೋಷಣೆಯಲ್ಲಿ ತೊಡಗುತ್ತಾಳೆ. ಮಕ್ಕಳು ದೊಡ್ಡವರಾದಂತೆಯೇ ಎಷ್ಟೋ ಮನೆಗಳಲ್ಲಿ ಹೆತ್ತವರನ್ನು ಕಡೆಗಣಿಸುವುದನ್ನು ನಿತ್ಯವೂ ನೋಡುತ್ತಿರುತ್ತೇವೆ. ಆದರೆ ಅಲ್ಲಲ್ಲಿ ಕೆಲವೊಂದು ಮಕ್ಕಳು ಮಾತ್ರ ಜನ್ಮ ನೀಡಿದ ಅಪ್ಪ-ಅಮ್ಮಂದಿರ ಕೃತಜ್ಞತೆಯನ್ನು ಮರೆಯದೇ ಅವರನ್ನು ಚೆನ್ನಾಗಿ ನೋಡಿಕೊಳ್ಳುವವರು ಇದ್ದಾರೆ.
ಅಂಥದ್ದೇ ಒಂದು ಭಾವುಕರಾಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೊಬ್ಬ ತನ್ನ ತಾಯಿಗೆ ಹೊಸ ಚಿನ್ನದ ಸರವನ್ನು ನೀಡಿ ಆಕೆಗೆ ಸರ್ಪ್ರೈಸ್ ಮಾಡುವ ವಿಡಿಯೋ ಇದಾಗಿದೆ. ಮಗನ ಈ ಪ್ರೀತಿಗೆ ಅಮ್ಮ ಮನಸೋತು ಅಚ್ಚರಿಗೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋದಲ್ಲಿ ತಾಯಿ ಯಾವುದೋ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಮಗ ನಿಧಾನವಾಗಿ ಹಿಂದುಗಡೆಯಿಂದ ಬಂದು ಆಕೆಯ ಕೊರಳಿಗೆ ಚಿನ್ನದ ಸರ ಹಾಕುತ್ತಾನೆ. ಇದರ ಅರಿವು ಇಲ್ಲದ ತಾಯಿ ಏಕಾಏಕಿ ಅಚ್ಚರಿಗೊಂಡು ಆನಂದಬಾಷ್ಪ ಸುರಿಸುವುದುನ್ನು ಕಂಡು ನೆಟ್ಟಿಗರು ಭಾವುಕರಾಗುತ್ತಾರೆ. ಇಂಥ ಮಕ್ಕಳು ಎಲ್ಲರ ಮನೆಯಲ್ಲಿಯೂ ಹುಟ್ಟಿ ಬರಲಿ ಎಂದು ಹಲವರು ಹಾರೈಸಿದ್ದಾರೆ.