ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್ ನೆಟ್ಟಿಗರ ಮನ ಗೆದ್ದಿದೆ.
ನಿವೃತ್ತ ಮೇಜರ್ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರ ಮಗ ಅದೇ ಅಕಾಡೆಮಿಯಿಂದ ಉತ್ತೀರ್ಣರಾಗಿದ್ದಾರೆ. ಅವರಿಬ್ಬರ ಫೋಟೋವನ್ನು ರಕ್ಷಣಾ ಇಲಾಖೆ ಪಿ.ಆರ್.ಒ. ಹಂಚಿಕೊಂಡಿದ್ದಾರೆ. ಪಾಸಾದ ತನ್ನ ಮಗನೊಂದಿಗೆ ನಿವೃತ್ತ ಅಧಿಕಾರಿ ತಾಯಿ ಫೋಟೋಗೆ ಖುಷಿಯಿಂದ ಪೋಸ್ ನೀಡುತ್ತಿರುವುದನ್ನು ನೋಡಬಹುದು.
ಚತುರ್ವೇದಿಯವರ ಮುಖದಲ್ಲಿ ಸಂತೋಷವು ಸ್ಪಷ್ಟವಾಗಿ ಗೋಚರಿಸಿದೆ. “ಲೇಡಿ ಆಫೀಸರ್ಗೆ ಇದು ಅಪರೂಪದ ಸಂಭ್ರಮದ ಕ್ಷಣ” ಎಂಬ ಶೀರ್ಷಿಕೆ ನೀಡಲಾಗಿದೆ.
ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ) 1995ರಲ್ಲಿ ಅಂದರೆ 27 ವರ್ಷಗಳ ಮೊದಲು ಚೆನ್ನೈ ನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ನೇಮಕಗೊಂಡಿದ್ದರು. ಚತುರ್ವೇದಿ ಸ್ವತಃ ತರಬೇತಿಯಲ್ಲಿ ಕೆಡೆಟ್ ಆಗಿದ್ದ ಕಾಲದ ಚಿತ್ರವೂ ಸಹ ಟ್ವೀಟರ್ ಥ್ರೆಡ್ನಲ್ಲಿದೆ.
ಭಾವಪರವಶರಾದ ಚತುರ್ವೇದಿಯವರ ಕಿರು ವಿಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ತನ್ನ ಮಗನ ಸಾಧನೆಯ ನಂತರ ತನಗೆ ಎಷ್ಟು ಸಂಭ್ರಮವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.