alex Certify ಗಗನಕ್ಕೇರಿದ ತರಕಾರಿಗಳ ಬೆಲೆ; ಜನಸಾಮಾನ್ಯರು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಕ್ಕೇರಿದ ತರಕಾರಿಗಳ ಬೆಲೆ; ಜನಸಾಮಾನ್ಯರು ಕಂಗಾಲು

ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ಅರ್ಜಿ ಆಹ್ವಾನ | SahilOnline

ಶಿವಮೊಗ್ಗ: ಬಿಸಿಲಿನ ಝಳ, ಚುನಾವಣೆಯ ಕಾವು ಏರುತ್ತಿದ್ದಂತೆಯೇ ಈಗ ತರಕಾರಿ ಬೆಲೆಯ ಬಿಸಿ ಸಾರ್ವಜನಿಕರನ್ನು ತಟ್ಟುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕೈಗೆಟಕುವಷ್ಟು ದರದಲ್ಲಿ ತರಕಾರಿ ಸಿಗುತ್ತಿದ್ದು, ಆದರೆ ಕಳೆದ 15 ದಿನಗಳಿಂದ ತರಕಾರಿ ಬೆಲೆಗಳು ಗಗನಕ್ಕೇರಿದೆ. ಬಡವರ ಪಾಲಿಗೆ ಅತ್ಯಂತ ಕಷ್ಟಕರವಾಗಿದೆ. ಇದರ ಜೊತೆಗೆ ದಿನಸಿ ಬೆಳೆಗಳು ಏರಿ ಜನಜೀವನ ದುಸ್ತರವಾಗಿದೆ.

ಕೆ.ಜಿ.ಗೆ 60-80 ರೂ. ಆಸುಪಾಸಿನಲ್ಲಿದ್ದ ಬೀನ್ಸ್ ಬೆಲೆ 200 ರೂ. ದಾಟಿದೆ. 10-15ರೂ.ಗೆ ಸಿಗುತ್ತಿದ್ದ ಟಮೋಟೊ ಈಗ 40 ರೂ. ಆಗಿದೆ. 30 ರೂ.ಗೆ ಸಿಗುತ್ತಿದ್ದ ಹೀರೇಕಾಯಿ 70 ರೂ. ದಾಟಿದೆ. ಹಾಗೆಯೇ ಬೆಂಡೆ, ಕೋಸು, ಕ್ಯಾರೆಟ್ ಬೆಲೆಗಳು ಕೂಡ ದುಪ್ಪಟವಾಗಿವೆ. ಹಸಿಮೆಣಸಿನಕಾಯಿ ಕೆ.ಜಿ.ಗೆ 100 ರೂ. ಆಗಿದೆ.

ಮಳೆ ಕೈಕೊಟ್ಟಿದ್ದರಿಂದ ತೋಟದ ಬೆಳೆಗಳು ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಳುವರಿಯಾಗಿದೆ. ಆದ್ದರಿಂದ ಮಾರುಕಟ್ಟೆಗೆ ತರಕಾರಿ ಬರುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಬೆಲೆಗಳು ಏರತೊಡಗಿವೆ. ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದೆ. ಬೆಲೆ ಏರಿದರೂ ರೈತನಿಗೆ ನಿಜವಾಗಿಯೂ ಸಿಗುವುದು ಕಷ್ಟವಾದಂತಾಗಿದೆ.

ಸ್ಥಳೀಯವಾಗಿ ತರಕಾರಿಗಳು ಹೆಚ್ಚಾಗಿ ಸಿಗುತ್ತಿತ್ತು. ಆದರೆ ಈಗ ಅದು ಲಭ್ಯವಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದ ತರಕಾರಿಗಳು ಮಾರುಕಟ್ಟೆ ಬರಬೇಕಾಗಿದೆ. ಸಾಗಾಣೆ ವೆಚ್ಚಕೂಡ ದುಬಾರಿಯಾಗಿದೆ. ಸ್ವಾಭಾವಿಕವಾಗಿಯೇ ಬೆಲೆ ಅಧಿಕವಾಗಿದೆ. ಇನ್ನು ನೀರುಳ್ಳಿ, ಬೆಳುಳ್ಳಿ, ಶುಂಠಿ ಬೆಲೆಯಲ್ಲೂ ಕೂಡ ಹೆಚ್ಚಾಗಿದೆ. ನೂರು ರೂ.ಗೆ 5 ಕೆ.ಜಿ. ಸಿಗುತ್ತಿದ್ದ ನೀರುಳ್ಳಿ, 3 ಕೆ.ಜಿ.ಯಾಗಿದೆ. ಬೆಳ್ಳುಳ್ಳಿ ಕೂಡ ಅತ್ಯಂತ ದುಬಾರಿಯಾಗಿದೆ. ನಾಟಿ ಬೆಳ್ಳುಳ್ಳಿ 250 ರೂ. ದಾಟಿದೆ. ಶುಂಠಿಯ ಬೆಲೆಯಲ್ಲೂ ಕೂಡ ಹೆಚ್ಚಳವಾಗಿದೆ.

ಕೋಸು, ಹಸಿಮೆಣಸಿನಕಾಯಿ, ನಿಂಬೆಹಣ್ಣು, ಬೀಟ್ರೋಟ್ ವಿವಿಧ ಸೊಪ್ಪುಗಳ ಬೆಲೆಗಳು ಕೂಡ ಏರಿವೆ. ಒಂದು ಕೊತ್ತುಂಬರಿ ಸಣ್ಣ ಕಟ್ಟಿಗೆ 10 ರೂ. ಆಗಿದೆ. ಪುದೀನ ಕೂಡ 10 ರೂ. ದಾಟಿದೆ. ಮೆಂತೆಸೊಪ್ಪಂತೂ ತುಂಬ ದುಬಾರಿಯಾಗಿದೆ. ಒಂದು ಸಣ್ಣ ಕಟ್ಟು, 20 ರೂ. ಗೆ ಮಾರಾಟವಾಗುತ್ತಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪಿನ ಮಾರಾಟವೇ ನಿಂತುಹೋಗಿವೆ. ಇನ್ನುಳಿದಂತೆ ಎಲ್ಲಾ ರೀತಿಯ ಸೊಪ್ಪುಗಳ ಬೆಲೆಗಳು ಏರಿವೆ. ಸಾಮಾನ್ಯವಾಗಿ ಸುಲಭವಾಗಿ ಸಿಗುತ್ತಿದ್ದ ನುಗ್ಗೆಸೊಪ್ಪು ಕೂಡ ಏರಿದೆ. ನುಗ್ಗೆಕಾಯಿ ಬೆಲೆಕೂಡ ಏರಿಕೆ ಕಂಡಿದೆ.

ಇದರ ಜೊತೆಗೆ ಹಣ್ಣುಗಳ ಬೆಲೆಯಲ್ಲೂ ಕೂಡ ಏರಿಕೆ ಆಗಿದೆ. ಮಾವಿನಹಣ್ಣು ಮಾರುಕಟ್ಟೆಗೆ ಕಾಲಿಟ್ಟರೂ ಕೂಡ ಬೆಲೆ ಇಳಿದಿಲ್ಲ. ಕಸಿ ಮಾವಿನಹಣ್ಣು 200 ರೂ. ಕೆ.ಜಿ.ಗೆ ಮಾರಾಟವಾಗುತ್ತಿದೆ. ಉಳಿದಂತೆ ಎಲ್ಲಾ ಮಾವಿನ ಹಣ್ಣಿನ ಬೆಲೆಯೂ ಏರಿಕೆಯಾಗಿದೆ. ದಾಳಿಂಬೆ ಬೆಲೆಯಂತೂ ಕೆ.ಜಿ.ಗೆ 250 ತಲುಪಿದೆ. ಸೇಬು, ಕಿತ್ತಲೆ, ದ್ರಾಕ್ಷಿ, ಪೇರಲೆ ಬೆಲೆಗಳು ಕೂಡ ಏರಿವೆ. ಜಂಬು ನೇರಳೆ ಹಣ್ಣಿನ ಬೆಲೆ ಕೆ.ಜಿ. ಗೆ 300 ರೂ. ಆಗಿದೆ.

ಹೀಗೆ ತರಕಾರಿ, ಸೊಪ್ಪು, ಹಣ್ಣುಗಳ ಬೆಲೆಗಳು ನಿಜಕ್ಕೂ ಗಗನಕ್ಕೇರಿದೆ. ಇದು ಅನಿವಾರ್ಯವಾದರೂ ಕೂಡ ಬಡ ಮತ್ತು ಮಧ್ಯಮ ವರ್ಗದವರ ಜೇಬಿಗೆ ಕತ್ತರಿಯಾಗುವುದಂತು ನಿಜ. ಮಳೆಗಾಲ ಆರಂಭವಾಗಿದ್ದರೂ ಕೂಡ ಹೊಸ ತರಕಾರಿಗಳು ಮಾರುಕಟ್ಟೆಗೆ ಬರಲು ಇನ್ನೂ ಸಮಯ ಬೇಕಾಗಿದೆ. ಅಲ್ಲಿಯವರೆಗೂ ಈ ದುಬಾರಿ ಬೆಲೆ ತೆರಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...