
ಬಾರಾಮುಲ್ಲಾದಿಂದ ಬನಿಹಾಲ್‌ಗೆ ಮೂರು ಗಂಟೆಗಳ ಪ್ರಯಾಣ. ಈ ಮಾರ್ಗದಲ್ಲಿ ಜಮ್ಮು ಮತ್ತು ಕಾಶ್ಮೀರದ ಕೆಲವು ಸುಂದರವಾದ ಭೂದೃಶ್ಯಗಳನ್ನ ಕಾಣಬಹುದು. ಹಿಮದಿಂದ ಆವೃತವಾದ ಬೆಟ್ಟಗಳಿಂದ ಹಿಡಿದು ಗಾಳಿಯಲ್ಲಿ ನಿಧಾನವಾಗಿ ತೂಗಾಡುವ ಚಳಿಗಾಲದ ಮರಗಳನ್ನು ಈ ಪ್ರಯಾಣದಲ್ಲಿ ಕಣ್ತುಂಬಿಕೊಳ್ಳಬಹುದು. ಈ ಬಾರಾಮುಲ್ಲಾ-ಬನಿಹಾಲ್ ರೈಲು ಪ್ರಯಾಣದ ಅದ್ಭುತ ವಿಡಿಯೋ ಹಂಚಿಕೊಂಡಿರುವ ಭಾರತೀಯ ರೈಲ್ವೇ, ದೇಶದ ಭೌಗೋಳಿಕ ವಿವಿಧತೆಯನ್ನ ತೋರಿಸಿದೆ.
ಚಳಿಗಾಲದಲ್ಲಿ ಸುರಿಯುವ ಭಾರೀ ಹಿಮ ಕಾಶ್ಮೀರ ಕಣಿವೆಯ ಪ್ರಮುಖ ದಾರಿಯನ್ನ ತಡೆಯುವುದರಿಂದ, ಈ ರೈಲು ಪ್ರಯಾಣಿಕರಲ್ಲಿ ಅತ್ಯಂತ ಜನಪ್ರಿಯವಾಗಿದೆ. ಕಾಶ್ಮೀರ ಕಣಿವೆಯನ್ನು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕಿಸುವ ಈ ಮಾರ್ಗ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರ ಜೊತೆಗೆ ಸುರಕ್ಷಿತವಾಗಿದೆ. ವಾರದ ಹಿಂದೆ ಪ್ರದೇಶದಲ್ಲಾದ ಭಾರೀ ಹಿಮಪಾತದಿಂದಾಗಿ, ಬಾರಾಮುಲ್ಲಾ-ಬನಿಹಾಲ್ ನಡುವಿನ 136 ಕಿಮೀ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಲ್ಲಿ ತೀವ್ರವಾದ ಶೀತ ಪರಿಸ್ಥಿತಿಯಲ್ಲಿದ್ದು, ಕಾಶ್ಮೀರ ಕಣಿವೆಗೆ 0 ಡಿಗ್ರಿ ತಾಪಮಾನ ಮರಳಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.