ಒರಿಸ್ಸಾ ರಾಜ್ಯದ ಪುರಿಯಲ್ಲಿರುವ ಜಗನ್ನಾಥ ದೇವಾಲಯ, ವಿಷ್ಣುವಿಗೆ ಸಮರ್ಪಿತವಾದ ಪ್ರಮುಖ ಐತಿಹಾಸಿಕ ದೇವಾಲಯ. ಪ್ರಸ್ತುತ ನಾವು ಕಾಣುವ ದೇವಾಲಯವನ್ನು 10ನೇ ಶತಮಾನದಲ್ಲಿ ಪುನರ್ ನಿರ್ಮಿಸಲಾಯಿತು.
ಈ ದೇಗುಲದ ವಾರ್ಷಿಕ ರಥಯಾತ್ರೆ ಹೆಸರುವಾಸಿಯಾದುದು. ಮೂರು ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥದ ಮೇಲೆ ಎಳೆಯುತ್ತಾರೆ. ಮಧ್ವಾಚಾರ್ಯರು ಸೇರಿದಂತೆ ಗುರು ನಾನಕ್, ಕಬೀರ್, ತುಲಸಿದಾಸರು, ರಾಮಾನುಜಾಚಾರ್ಯರು ಮೊದಲಾದವರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಆದಿಶಂಕರ ಇಲ್ಲಿ ಗೋವರ್ಧನ ಮಠ ಸ್ಥಾಪಿಸಿದರು.
ಬೃಹತ್ ದೇಗುಲದ ಸಂಕೀರ್ಣ 4 ಲಕ್ಷ ಚದರ ಅಡಿ ಜಾಗವನ್ನು ಒಳಗೊಂಡಿದೆ. ದೇವಾಲಯ ಎಲ್ಲಾ ದಿಕ್ಕುಗಳಲ್ಲಿ 4 ಪ್ರವೇಶಗಳನ್ನು ಹೊಂದಿದೆ. ಬೆಳಿಗ್ಗೆ 9ರಿಂದ ರಾತ್ರಿ 12ರವರೆಗೆ ತೆರೆದಿರುತ್ತದೆ.
ಜಗನ್ನಾಥ ಅಂದರೆ ಕೃಷ್ಣ, ಬಲಭದ್ರ ಅಂದರೆ ಬಲರಾಮ ಮತ್ತು ಸುಭದ್ರಾ ಇಲ್ಲಿ ಪೂಜಿಸಲ್ಪಡುವ ಮೂವರು ದೇವತೆಗಳು. ಈ ದೇವರ ಪ್ರತಿಮೆಗಳನ್ನು ದಾರು ಎಂದು ಕರೆಯಲ್ಪಡುವ ಪವಿತ್ರ ಬೇವಿನ ಮರದ ತುಂಡುಗಳಿಂದ ಕೆತ್ತಲಾಗಿದೆ. ಇದನ್ನು ರತ್ನ ಖಚಿತ ಆಸನದ ಮೇಲೆ ಕೂರಿಸಲಾಗುತ್ತದೆ. ಋತುಗಳಿಗೆ ಅನುಗುಣವಾಗಿ ದೇವರನ್ನು ವಿವಿಧ ಬಟ್ಟೆ ಮತ್ತು ಅಭರಣಗಳಿಂದ ಅಲಂಕರಿಸಲಾಗುತ್ತದೆ.