ಬ್ರಿಟನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಸಿಖ್ ಮಹಿಳೆ ಕ್ಯಾಪ್ಟನ್ ಹರ್‌ಪ್ರೀತ್ ಚಾಂಡಿ ಅವರು ಹೊಸ ದಾಖಲೆ ಬರೆದಿದ್ದಾರೆ. ಒಟ್ಟಾರೆ 40 ದಿನಗಳ ಏಕಾಂಗಿ ಟ್ರೆಕ್ಕಿಂಗ್ ನಡೆಸಿ, ಜ.3ರಂದು ಅವರು ದಕ್ಷಿಣ ಧ್ರುವಕ್ಕೆ ತೆರಳಿದ್ದಾರೆ.
ಅಂಟಾರ್ಟಿಕಾದ ಗರ್ಭಕ್ಕೆ ಮುಟ್ಟಿರುವ ಚಾಂಡಿ, ಬರೋಬ್ಬರಿ 700 ಮೈಲಿಗಳಷ್ಟು ಟ್ರೆಕ್ಕಿಂಗ್ ನಡೆಸಿರುವುದು ಸವಾಲಿನ ವಿಷಯವೇ ಸರಿ.
19ನೇ ವಯಸ್ಸಿನಲ್ಲಿ ಸೇನೆಗೆ ಭರ್ತಿಯಾದ ಚಾಂಡಿ ಅವರು, ಬ್ರಿಟನ್ ಭೂಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನವೆಂಬರ್ 7ರಂದು ಅವರು ಚಿಲಿಗೆ ವಿಮಾನದಲ್ಲಿ ತಲುಪಿದರು. ಅದಕ್ಕೂ ಮುನ್ನ ಅವರು ಹಿಮಪರ್ವತಗಳ ಟ್ರೆಕ್ಕಿಂಗ್ ಅಭ್ಯಾಸವನ್ನು ಫ್ರೆಂಚ್ ಆಲ್ಪ್ಸ್‌ನಲ್ಲಿ ನಡೆಸಿದ್ದರು. ಜತೆಗೆ ಐಸ್‌ಲ್ಯಾಂಡಿನ ಲಾಂಗ್‌ಜೊಕುಲ್ ಹಿಮಗುಡ್ಡಗಳಲ್ಲಿ 27 ದಿನಗಳನ್ನು ಕಳೆದಿದ್ದರು.
ಇಂಥ ತಾಲೀಮಿನಿಂದ ಸನ್ನದ್ಧರಾದ ಚಾಂಡಿ, ಇಂಗ್ಲೆಂಡ್‌ಗೆ ಮನೆಗೆ ಮರಳಿದ ನಂತರ ಬೆನ್ನಿಗೆ ಟೈಯರ್ ಕಟ್ಟಿಕೊಂಡು ನಡೆಯುವುದನ್ನು ಅಭ್ಯಾಸ ಮಾಡುತ್ತಿದ್ದರು. ಯಾಕೆಂದರೆ ಹಿಮಪರ್ವತ ಏರುವಾಗ ಅಗತ್ಯ ವಸ್ತುಗಳ ದೊಡ್ಡ ಮೂಟೆಯನ್ನು ಬೆನ್ನಿನ ಮೇಲೆ ಹೊತ್ತು ಒಯ್ಯುವುದು ದೊಡ್ಡ ಸಾಹಸವಾಗಿದೆ. ಇದು ಚಾರಣಿಗರಿಗೆ ಸವಾಲಿನ ವಿಷಯ.
ಸದ್ಯ ದಕ್ಷಿಣ ಧ್ರುವದಲ್ಲಿ ಭಾರಿ ಹಿಮಮಳೆ ಆಗುತ್ತಿದೆ. ಮಂಜು ಎಲ್ಲಾಕಡೆ ಸುರಿಯುತ್ತಿದೆ. ಜನರು ತಾವು ತಮ್ಮ ಸುತ್ತಲೂ ಹಾಕಿಕೊಂಡಿರುವ ಗಡಿಯ ಗೆರೆಗಳನ್ನು ಅಳಿಸಿಹಾಕಿ, ಜಗತ್ತನ್ನು ಅನ್ವೇಷಿಸಲು ಹೊರಡಬೇಕು. ಹಾಗಂತ ದೊಡ್ಡ ಬಂಡಾಯ ಅಥವಾ ಬಂಡುಕೋರ ಎನಿಸಿಕೊಳ್ಳಬೇಕಿಲ್ಲ ಎನ್ನುವುದು ನನ್ನ ಈ ಏಕಾಂಗಿ ಟ್ರೆಕ್ಕಿಂಗ್ ಸಾಹಸದ ಅನುಭವ ಎಂದು ಚಾಂಡಿ ಹೇಳಿಕೊಂಡಿದ್ದಾರೆ.
1994ರಲ್ಲಿ ದಕ್ಷಿಣ ಧ್ರುವಕ್ಕೆ ಏಕಾಂಗಿ ಟ್ರೆಕ್ಕಿಂಗ್ ನಡೆಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ನಾರ್ವೆಯ ಲಿವ್ ಆರ್ನಿಸೆನ್ ಪಾತ್ರರಾಗಿದ್ದರು.