ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ಅಗತ್ಯವಿದೆ.
ಆದರೆ ಜಗನ್ನಾಥ ದೇವಾಲಯದಲ್ಲಿ ಬುಧವಾರ ಊಹಿಸಲಾಗದ ಘಟನೆಯೊಂದು ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬರು ದೇವಸ್ಥಾನದ ಭದ್ರತೆಯನ್ನು ದಾಟಿ ದೇವಸ್ಥಾನದ ಗೋಪುರಕ್ಕೆ ಏರಿದರು. ಈ ಘಟನೆ ಎಲ್ಲರನ್ನು ಬೆರಗುಗೊಳಿಸಿದೆ. ಬುಧವಾರ ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಭದ್ರತೆಯನ್ನು ಬೇಧಿಸಿ ದೇವಾಲಯದ ಮೇಲಕ್ಕೆ ಏರಿದ್ದು ದೇವಾಲಯದೊಳಗೆ ಕೋಲಾಹಲಕ್ಕೆ ಕಾರಣವಾಯಿತು. ಭಕ್ತರು ಸಂಜೆ ದೇವಸ್ಥಾನ ಪ್ರವೇಶಿಸಲು ಕಾಯುತ್ತಿದ್ದಾಗ ಈ ದಿಢೀರ್ ಮತ್ತು ನಾಟಕೀಯ ಘಟನೆಯು ಆಡಳಿತ ಮಂಡಳಿಗೆ ಭಾರೀ ಅಡಚಣೆ ತಂದಿತು.
ಪುರಿಯ ಜಗನ್ನಾಥ ದೇವಾಲಯ ಬಿಗಿ ಭದ್ರತೆಯಿಂದ ಸುತ್ತುವರಿದಿದೆ. ಆದರೆ ಭದ್ರತಾ ಲೋಪ ಕುರಿತು ತನಿಖೆ ನಡೆಯುತ್ತಿದೆ. ವ್ಯಕ್ತಿ ತಾನು ಛತ್ರಪುರದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ದೇವಾಲಯದ ಗೋಪುರ ಏರಿದ ನಂತರ ಆತನನ್ನು ಕೆಳಗಿಳಿಸುವ ಮೊದಲು ಅಲ್ಲಿ ಸಾಕಷ್ಟು ಹೊತ್ತು ಕೂತಿದ್ದ. ನಂತರ ಪೊಲೀಸರು ಮುಂದಿನ ಕ್ರಮಕ್ಕಾಗಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತ 1988 ರಿಂದ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಮತ್ತು ಕನಸು ನನಸಾಗಿಸಿಕೊಳ್ಳಲು ನೀಲ ಚಕ್ರವನ್ನು ಸ್ಪರ್ಶಿಸಲು ಬಯಸಿದ್ದ ಎನ್ನಲಾಗಿದೆ. ಪೊಲೀಸರ ಪ್ರಕಾರ ವ್ಯಕ್ತಿಯು ವಯಸ್ಕನಾಗಿದ್ದು ತೊಂದರೆಗೊಳಗಾಗಿರುವಂತೆ ತೋರುತ್ತಿದೆ. ತನಿಖೆ ಇನ್ನೂ ಮುಂದುವರೆದಿದೆ.