ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ಇರುವ ವಿನೋದದ ಚಟುವಟಿಕೆಗಳಲ್ಲಿ ಅತ್ಯಂತ ಭಯಾನಕ ಮತ್ತು ಥ್ರಿಲ್ ನೀಡುವ ಚಟುವಟಿಕೆಯೆಂದರೆ ರೋಲರ್ ಕಾಸ್ಟರ್. ಈ ರೋಲರ್ ಕಾಸ್ಟರ್ ರೈಡ್ ಮಾಡಲು ಗಟ್ಟಿ ಹೃದಯವಿರಬೇಕು ಮತ್ತು ಧೈರ್ಯವಿರಬೇಕು.
ಪುಕ್ಕಲುತನ ಇರುವವರು ಏನಾದರೂ ಈ ರೋಲರ್ ಕಾಸ್ಟರ್ ಗಳ ರೈಡ್ ಗೆ ಹೋದರೆಂದರೆ ಹೊಟ್ಟೆಯಲ್ಲಿರುವುದೆಲ್ಲಾ ಹೊರ ಬಂದು ಕೆಳಗೆ ಇಳಿಯುವಷ್ಟರಲ್ಲಿ ನಾಲ್ಕಾರು ಮಂದಿ ಅವರ ಆರೈಕೆ ಮಾಡಬೇಕಾಗುತ್ತದೆ.
ಈ ರೋಲರ್ ಕಾಸ್ಟರ್ ಅತ್ಯಂತ ವೇಗವಾಗಿ ತಿರುಗುತ್ತಾ ಆಕಾಶದೆತ್ತರಕ್ಕೆ ಕೊಂಡೊಯ್ದು ಅಲ್ಲಿ ಅರೆಕ್ಷಣ ತಲೆ ಕೆಳಗಾಗಿ ನಿಲ್ಲಿಸುತ್ತದೆ. ನಂತರ ಭಾರೀ ವೇಗದಲ್ಲಿ ಇಳಿಯುವುದು, ತಿರುಗುವ ಕ್ಷಣಗಳು ಎಂತಹವರಲ್ಲೂ ತಲೆ ತಿರುಗುವಂತೆ ಮಾಡುತ್ತದೆ. ಆದರೆ, ಇಲ್ಲೊಂದು ರೋಲರ್ ಕಾಸ್ಟರ್ ರೈಡರ್ ಗಳನ್ನು ಬರೋಬ್ಬರಿ 45 ನಿಮಿಷಗಳ ಕಾಲ ತಲೆ ಕೆಳಗಾಗಿ ನಿಲ್ಲಿಸಿದೆ.
ಶಾರೂಕ್ ತದ್ರೂಪಿಯ ಫೋಟೋ ನೋಡಿ ದಂಗಾದ ನೆಟ್ಟಿಗರು
ಇದು ಆಶ್ಚರ್ಯವಾದರೂ ನಂಬಬೇಕು. ಯುಎಸ್ ನ ಉತ್ತರ ಕ್ಯಾರೋಲಿನಾದಲ್ಲಿನ ಕ್ಯಾರೋವಿಂಡ್ಸ್ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ.
ಗುಂಪೊಂದು ರೋಲರ್ ಕಾಸ್ಟರ್ ನಲ್ಲಿ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಇದರ ಪರಿಣಾಮ ರೋಲರ್ ಕಾಸ್ಟರ್ ಸ್ಥಗಿತಗೊಂಡಿದೆ. ಆ ವೇಳೆ ಗುಂಪು ಎಲ್ಲಿತ್ತು ಎಂಬ ಪ್ರಶ್ನೆಗೆ ಉತ್ತರ ಹೇಳಿದರೆ ನೀವು ದಂಗಾಗುತ್ತೀರಿ.
ಈ ಗುಂಪು 125 ಅಡಿ ಎತ್ತರದಲ್ಲಿತ್ತು. ಅದೂ ಸಹ ತಲೆ ಕೆಳಗಾಗಿ ! ಹೌದು, ಇಷ್ಟು ಎತ್ತರಕ್ಕೆ ಹೋದಾಗ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಸರಿ ಹೋಗುತ್ತದೆ, ಈಗ ಸರಿ ಹೋಗುತ್ತದೆ. ನಾವು ಕೆಳಗೆ ಹೋಗಬಹುದು ಎಂದು ಕಾಯುತ್ತಾ ಕುಳಿತವರಿಗೆ ಭ್ರಮನಿರಸನ ಕಾದಿತ್ತು. ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಸಮಸ್ಯೆ ಪರಿಹರಿಸಿ ರೋಲರ್ ಕಾಸ್ಟರ್ ನ ಮೇಲಿದ್ದ ರೈಡರ್ ಗಳನ್ನು ಕೆಳಗಿಳಿಸಲು ಸಾಧ್ಯವೇ ಆಗಲಿಲ್ಲ. ಹೀಗೆ ಮರಳಿ ಪ್ರಯತ್ನ ಮಾಡು ಎನ್ನುವಂತೆ ಸುಮಾರು 45 ನಿಮಿಷಗಳ ಪ್ರಯತ್ನದ ಬಳಿಕ ಸಮಸ್ಯೆ ಪರಿಹರಿದು ರೈಡರ್ ಗಳು ಕೆಳಗೆ ಬಂದಿದ್ದಾರೆ. ನಿಟ್ಟುಸಿರನ್ನೂ ಬಿಟ್ಟಿದ್ದಾರೆ.
ಪುಣ್ಯಕ್ಕೆ ಯಾರೊಬ್ಬರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಬಹುತೇಕ ಮಂದಿ ಇನ್ನೆಂದೂ ಇಂತಹ ರೋಲರ್ ಕಾಸ್ಟರ್ ರೈಡ್ ನ ಸಹವಾಸಕ್ಕೆ ಹೋಗುವುದೆ ಇಲ್ಲ ಎಂದು ಶಪಥ ಮಾಡಿದ್ದಾರಂತೆ !