ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಹಲ್ಲೆ ನಡೆಸಿದಂತಹ ಅಮಾನವೀಯ ಘಟನೆಯೊಂದು ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಘಟನೆ ಬಳಿಕ ಪೊಲೀಸರು ದೂರನ್ನು ದಾಖಲಿಸಿಕೊಳ್ಳಲು 2 ದಿನಗಳ ಕಾಲ ಕಾಯಿಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆನೇಕಲ್ ತಾಲೂಕಿನ ದೊಡ್ಡಬೊಮ್ಮಸಂದ್ರದಲ್ಲಿ ಈ ಘಟನೆ ಸಂಭವಿಸಿದೆ. ರಾಮಕೃಷ್ಣ ರೆಡ್ಡಿ, ಸುನೀಲ್ ಕುಮಾರ್ ಹಾಗೂ ಇಂದ್ರಮ್ಮ ಎಂಬ ಮೂವರ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ರಾಮಕೃಷ್ಣ ರೆಡ್ಡಿ ಹಾಗೂ ಸುನೀಲ್ ಕುಮಾರ್ರನ್ನು ಬಂಧಿಸಿದ್ದು, ಇಂದ್ರಮ್ಮ ಪತ್ತೆಗೆ ಬಲೆ ಬೀಸಿದ್ದಾರೆ.
ಸಹೋದರಿಯರು ನೀಡಿರುವ ದೂರಿನ ಪ್ರಕಾರ ಮಹಿಳೆಯು ದೊಡ್ಡಬೊಮ್ಮಸಂದ್ರ ಸಮೀಪದ ನೆರಿಗಾ ಗ್ರಾಮದ ನಿವಾಸಿಯಾದ ರಾಮಕೃಷ್ಣ ರೆಡ್ಡಿ ಎಂಬವರ ಬಳಿ ಮಕ್ಕಳ ಶಿಕ್ಷಣಕ್ಕೆಂದು 1 ಲಕ್ಷ ರೂಪಾಯಿ ಸಾಲವನ್ನು 30 ಪ್ರತಿಶತ ಬಡ್ಡಿದರಕ್ಕೆ ಪಡೆದುಕೊಂಡಿದ್ದರು.
ಆದರೆ ಈ ಮಹಿಳೆ ಬಳಿ ಒಂದೇ ಬಾರಿಗೆ ಪೂರ್ತಿ ಹಣವನ್ನು ಮರುಪಾವತಿ ಮಾಡುವಂತೆ ಒತ್ತಡ ಹೇರಲಾಗಿದೆ. ಜಮೀನನ್ನು ಮಾರಿ ಹಣ ಪಾವತಿ ಮಾಡುತ್ತೇನೆಂಬ ಒಪ್ಪಂದವನ್ನೂ ಇವರು ಮುರಿದಿದ್ದರು. ಆರೋಪಿಗಳು ಸಂತ್ರಸ್ತೆಯರಿದ್ದ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ. ಈ ಸಂಬಂಧ ಮಹಿಳೆಯರು ಸರ್ಜಾಪುರ ಠಾಣೆ ಮೆಟ್ಟಿಲೇರಿದ್ದರು. ಆದರೆ ಇನ್ಸ್ಪೆಕ್ಟರ್ ರಾಘವೇಂದ್ರ ಮೊದಲು ದೂರು ಸ್ವೀಕರಿಸಲು ನಿರಾಕರಿಸಿದ್ದರು ಎನ್ನಲಾಗಿದೆ.