ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಸೋಮಶೇಖರ್ ಗೆ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು, ಶಾಸಕರೋರ್ವರ ಪುತ್ರಿ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಅಶ್ಲೀಲ ವಿಡಿಯೋ ಕಳುಹಿಸಿ ನಿಶಾಂತ್ ಸೋಮಶೇಖರ್ ಗೆ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಆರೋಪಿ ಖ್ಯಾತ ಜ್ಯೋತಿಷಿ ಮಗ ಎನ್ನಲಾಗುತ್ತಿದ್ದು, ರಾಹುಲ್ ಭಟ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಯನ್ನು ಗೋವಾದಲ್ಲಿ ಬಂಧಿಸಲಾಗಿದೆ. ಆತ ಸಚಿವ ಸೋಮಶೇಖರ್ ಬಳಿ ಈ ಹಿಂದೆ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನು ಈ ಬ್ಲ್ಯಾಕ್ ಮೇಲ್ ಪ್ರಕರಣದ ಹಿಂದೆ ಉತ್ತರ ಕರ್ನಾಟಕ ಮೂಲದ ಜನಪ್ರಿಯ ಶಾಸಕರೊಬ್ಬರ ಪುತ್ರಿ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆಕೆ ಸದ್ಯ ಲಂಡನ್ ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶಾಸಕರ ಪುತ್ರಿಗಾಗಿ ಹಾಗೂ ಇನ್ನೋರ್ವ ಆರೋಪಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ.
ಯುಕೆ ಸಿಮ್ ಬಳಸಿ ಅದೇ ನಂಬರ್ ನಿಂದ ಯುವತಿಯೊಂದಿಗೆ ನಿಶಾಂತ್ ಸೋಮಶೇಖರ್ ಇರುವ ರೀತಿಯಲ್ಲಿನ ವಿಡಿಯೋವನ್ನು ಸಚಿವರ ಪಿಎ ವಾಟ್ಸಪ್ ಗೆ ಕಳುಹಿಸಲಾಗಿತ್ತು. ಇದು ನಕಲಿ ವಿಡಿಯೋ ಆಗಿದ್ದು, ತನ್ನ ಹಾಗೂ ತನ್ನ ತಂದೆಯ ರಾಜಕೀಯ ಬೆಳವಣಿಗೆ ಸಹಿಸದೇ ತೇಜೋವಧೆಗಾಗಿ ವಿಡಿಯೋ ಕಳುಹಿಸಿ, 1 ಕೋಟಿ ರೂಪಾಯಿ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ನಿಶಾಂತ್ ಸೋಮಶೇಖರ್ ಸೈಬರ್ ಕ್ರೈಂ ಹಾಗೂ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಒಟ್ಟಾರೆ ಸಚಿವರ ಪುತ್ರನ ಬ್ಲ್ಯಾಕ್ ಮೇಲ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಉತ್ತರ ಕರ್ನಾಟಕ ಮೂಲದ ಶಾಸಕರ ಪುತ್ರಿ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.