ಮಂಡ್ಯ: ಇದೆಂಥಹ ಹಿಂಸೆ…ಹೆತ್ತ ತಂದೆ-ತಾಯಿಯೇ ಸ್ವಂತ ಮಗ-ಸೊಸೆಯನ್ನು ಮಕ್ಕಳಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಹೊರಹಾಕಿ, ಕೊಟ್ಟಿಗೆಗೆ ದಬ್ಬಿ ಕಿರುಕುಳ ನೀಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದ ನಾಗತಿಹಳ್ಳಿಯಲ್ಲಿ ನಡೆದಿದೆ.
ತಂದೆ-ತಾಯಿ ಕಿರುಕುಳಕ್ಕೆ ನೊಂದ 32 ವರ್ಷದ ಮಗ ಕೊಟ್ಟಿಗೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಪ್ಪ-ಅಮ್ಮನ ಕಿರುಗುಳಕ್ಕೆ ಬೇಸತ್ತ ಗಿರೀಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಅಪ್ಪ ರಾಜು ಹಾಗೂ ಅಮ್ಮ ದೇವಮಣಿ ಕಾರಣ ಎಂದು ಬರೆದಿದ್ದು, ಅವರು ನೀಡುತ್ತಿದ್ದ ಹಿಂಸೆ, ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾನೆ.
ತನ್ನ ತಂದೆ ರಾಜು ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ. ತಾಯಿ ದೇವಮಣಿ ಕೂಡ ಸರ್ಕಾರಿ ಶಾಲೆ ಶಿಕ್ಷಕಿ. ನನಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತಂದೆ-ತಾಯಿ ನನಗೆ ಹಾಗೂ ನನ್ನ ಪತ್ನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಪ್ರತಿದಿನ ವ್ಯಂಗ್ಯ ಮಾಡುವುದು, ಹಿಂಸೆ ಕೊಡುವುದು ಮಾಡುತ್ತಿದ್ದರು. ಕೊನೆಗೆ ನಮ್ಮನ್ನು ಮನೆಯಿಂದ ಹೊರಹಾಕಿ ಕೊಟ್ಟಿಗೆಯಲ್ಲಿಟ್ಟಿದ್ದರು. ಆಸ್ತಿಯನ್ನೂ ಕೊಡದೇ ಜೀವನೋಪಾಯಕ್ಕೆಂದು ಇಟ್ಟುಕೊಂಡಿದ್ದ ಒಂದು ಟ್ರ್ಯಾಕ್ಟರ್ ನ್ನು ಕೂಡ ಕಸಿದುಕೊಂಡಿದ್ದರು.
ಕರೆಂಟ್ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತೆ ಈ ವಾಷಿಂಗ್ ಮಷಿನ್……!
ಜಮೀನು, ಮನೆ, ಆಸ್ತಿ, ದುಡಿಯಲು ಟ್ರ್ಯಾಕ್ಟರ್ ಕೂಡ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಗಿರೀಶ್ ದಂಪತಿ ಕೊಟ್ಟಿಗೆಯಲ್ಲಿಯೇ ವಾಸವಾಗಿದ್ದರು. ಇದೆಲ್ಲದರಿಂದ ಮನನೊಂದು ತನ್ನ ಸಾವಿಗೆ ತಂದೆ-ತಾಯಿಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೊತೆಗೆ ಕೊಟ್ಟಿಗೆಯ ಗೋಡೆಯ ಮೇಲೆಯೂ ನನ್ನ ಸಾವಿಗೆ ಹೆತ್ತ ಅಪ್ಪ-ಅಮ್ಮನೇ ಕಾರಣ ಎಂದು ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ತಂದೆ-ತಾಯಿ ತಲೆಮರೆಸಿಕೊಂಡಿದ್ದು, ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.