ಹೋಟೆಲ್‍ಗಳಲ್ಲಿ ಆಹಾರ ಆರ್ಡರ್ ಮಾಡಿದ ಬಳಿಕ ಸಾಂಬಾರಿನಲ್ಲಿ ಜಿರಳೆ ಬಿದ್ದಿರುವ ಇತ್ಯಾದಿ ನ್ಯೂಸ್ ಗಳ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಹಾಗೆಯೇ ಜ್ಯೂಸ್ ಬಾಟಲಿಯಲ್ಲಿ ಹುಳವಿರುವ ದೃಶ್ಯಗಳು ಕೂಡ ಈ ಹಿಂದೆ ವೈರಲ್ ಆಗಿತ್ತು. ಇದೀಗ ವೈರಲ್ ಆದ ಫೋಟೋ ನೋಡಿದ್ರೆ, ಇನ್ಮುಂದೆ ನಿಮ್ಮ ನೆಚ್ಚಿನ ಆಹಾರದಿಂದ ನಿಮ್ಮನ್ನು ದೂರವಿರಿಸಲು ಇದು ಕಾರಣವಾಗಬಹುದು.
ಹೌದು, ಕೆಎಫ್‌ಸಿ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿ ಕೊಕ್ಕಿನೊಂದಿಗೆ ಪೂರ್ಣ ಕೋಳಿಯ ತಲೆಯನ್ನು ಕಂಡು ಮಹಿಳೆ ಆಘಾತಕ್ಕೊಳಗಾದ ಘಟನೆ ಯುಕೆನಲ್ಲಿ ನಡೆದಿದೆ. ಇದರ ಫೋಟೋ ಕ್ಲಿಕ್ಕಿಸಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಳಿಯ ಕಣ್ಣುಗಳು ಮತ್ತು ಕೊಕ್ಕಿನಿಂದ ಸಂಪೂರ್ಣ ತಲೆಯಿರುವುದನ್ನು ಫೋಟೋದಲ್ಲಿ ನೋಡಬಹುದು.
ಗೇಬ್ರಿಯೆಲ್ ಎಂದು ಗುರುತಿಸಲಾದ ಗ್ರಾಹಕರು, ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್‌ನಲ್ಲಿರುವ ಕೆಎಫ್‌ಸಿ ಔಟ್‌ಲೆಟ್‌ನಿಂದ ಟೇಕ್ ಅವೇ ಊಟವನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ತನ್ನ ಹಾಟ್ ವಿಂಗ್ಸ್ ಮೀಲ್‌ನಲ್ಲಿ ಫ್ರೈಡ್ ಚಿಕನ್ ಹೆಡ್ ಅನ್ನು ಕಂಡುಕೊಂಡಿದ್ದಾಗಿ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದು, ಚಿತ್ರ ನೋಡಿದ ನೆಟ್ಟಿಗರು ಕೂಡ ದಿಗ್ಭ್ರಮೆಗೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿ, ಈ ಫೋಟೋದಿಂದ ನಾವು ನಿಜವಾಗಿಯೂ ಆಶ್ಚರ್ಯಗೊಂಡಿದ್ದೇವೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಇನ್ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದೆ.