alex Certify ರೈತರು, ವರ್ತಕರಿಗೆ ಗುಡ್ ನ್ಯೂಸ್: ಜನಪರ ಎಪಿಎಂಸಿ ಕಾಯ್ದೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು, ವರ್ತಕರಿಗೆ ಗುಡ್ ನ್ಯೂಸ್: ಜನಪರ ಎಪಿಎಂಸಿ ಕಾಯ್ದೆ ಜಾರಿ

ಶಿವಮೊಗ್ಗ: ರೈತರು, ವರ್ತಕರು, ಎಪಿಎಂಸಿ ಅವಲಂಬಿತರು ಎಲ್ಲರ ಸಲಹೆಗಳಿಗೆ ಮಾನ್ಯತೆ ನೀಡಿ, ಸಮನ್ವಯತೆಯಿಂದ ಜನಪರ, ರೈತ ಪರವಾದ ಎಪಿಎಂಸಿ ವಿಧೇಯಕ 2023 ನ್ನು ಜಾರಿಗೆ ತರಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ)(ತಿದ್ದುಪಡಿ) ವಿಧೇಯಕ 2023 ನ್ನು ಪರಿಶೀಲಿಸಿ ಸದನಕ್ಕೆ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ಪರಿಶೀಲನಾ ಸಮಿತಿಯು ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆಸಿದ ರೈತರು, ವರ್ತಕರು, ದಲಾಲರು ಮತ್ತು ಹಮಾಲರ ಪ್ರತಿನಿಧಿಗಳಿಂದ ಸಲಹೆಯನ್ನು ಸ್ವೀಕರಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ)(ತಿದ್ದುಪಡಿ) ವಿಧೇಯಕ 2023 ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್ತಿನಲ್ಲಿ ರೈತರು, ವರ್ತಕರು ಸೇರಿದಂತೆ ಇದಕ್ಕೆ ಸಂಬಂಧಿಸಿದವರಿಂದ ಸಲಹೆಗಳನ್ನು ಪಡೆಯುವಂತೆ ಸೂಚಿಸಿರುವ ಹಿನ್ನಲೆ ಸಭೆಗಳನ್ನು ನಡೆಸಲಾಗುತ್ತಿದೆ. ಕೋಲಾರದಲ್ಲಿ ಸಭೆ ನಡೆಸಿ, ಇದೀಗ ಇಲ್ಲಿ ನಡೆಸಲಾಗುತ್ತಿದೆ.

ಸಭೆಯಲ್ಲಿ ರೈತ ಸಂಘದವರು, ವರ್ತಕರು, ಅಕ್ಕಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ಎಪಿಎಂಸಿ ಮಾಜಿ ಪದಾಧಿಕಾರಿಗಳು, ಎಪಿಎಂಸಿ ಅವಲಂಬಿತ ದಲಾಲಿಗಳ ಸಂಘ, ಪೇಟೆ ಕಾರ್ಯಕರ್ತರು, ಹಮಾಲಿ, ತೂಕದವರ ಸಂಘಗಳ ಪದಾಧಿಕಾರಿಗಳ ಸಲಹೆಗಳನ್ನು ಸ್ವೀಕರಿಸಲಾಗಿದೆ. ಅವರ ಸಲಹೆಗಳಿಗೆ ಮಾನ್ಯತೆ ನೀಡಲಾಗುವುದು.

ಎಪಿಎಂಸಿ ಯಲ್ಲಿ 16 ಸಾವಿರ ಕೋಟಿ ಆಸ್ತಿ ಇದ್ದು, 8 ಸಾವಿರ ಎಕರೆಯಷ್ಟು ಜಮೀನು ಇದೆ. ಇದನ್ನು ಉಳಿಸಿಕೊಂಡು ಪುನರ್ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ಸಭೆಯಲ್ಲಿ ಕೇಳಿಬಂದ ಎಪಿಎಂಸಿ ಅಧಿಕಾರ ವಿಕೇಂದ್ರೀಕರಣ, ಸೆಸ್ ಕಡಿತಗೊಳಿಸುವುದು, ಆಸ್ತಿ ತೆರಿಗೆ ಇತರೆ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಪ್ರಸ್ತುತ ಎಪಿಎಂಸಿ ಕಾಯ್ದೆಯ ಪ್ರಕಾರ ರೈತ ಎಲ್ಲಿ ಬೇಕಾದರೂ ತನ್ನ ಉತ್ಪನ್ನ ಮಾರಾಟ ಮಾಡಬಹುದು. ಈ ನೀತಿಯಿಂದ ಎಪಿಎಂಸಿ ವಿನಾಶದ ಅಂಚಿಗೆ ಬರುವುದು. ಮಲ್ಟಿ ನ್ಯಾಷನಲ್ ಕಂಪೆನಿಗಳು ನೇರವಾಗಿ ರೈತರಿಂದ ಖರೀದಿಗೆ ಮುಂದಾದರೆ ಅವರು ಹೇಳುವ ತಳಿ, ಗುಣಮಟ್ಟ, ಮಾನದಂಡಗಳನ್ನು ಪಾಲಿಸಬೇಕು. ಒಂದು ವೇಳೆ ಅದರಲ್ಲಿ ಸೋತರೆ ತಿರಸ್ಕರಿಸಲಾಗುತ್ತದೆ. ಹೊಸ ತಳಿಗಳಿಂದ ಹಳೇ ತಳಿ ನಾಶವಗುತ್ತದೆ. ರೈತರು-ಗ್ರಾಹಕರು ಕಾರ್ಪೋರೇಟ್ ಹಿಡಿತಕ್ಕೊಳಗಾಗುತ್ತಾರೆ. ಎಪಿಎಂಸಿ ಆದಾಯ ನಿಲ್ಲುತ್ತದೆ. ಅವಲಂಬಿತ ದಲಾಲರು, ಹಮಾಲರು, ಲಗ್ಗೇಜ್ ವಾಹನ ಇವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಪ್ರಸ್ತುತದ ಕಾಯ್ದೆ ರದ್ದುಪಡಿಸಬೇಕು ಹಾಗೂ   ಟೆಂಡರ್ ವ್ಯವಸ್ಥೆ, ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆಯೊಂದಿಗೆ ಹಳೆ ಕಾಯ್ದೆಗೆ ಅಗತ್ಯ ಸುಧಾರಣೆಗಳನ್ನು ತಂದು ಜಾರಿಗೆ ತರಬೇಕೆಂದು ಮನವಿ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...