alex Certify BREAKING: ಮೇ 31 ರಿಂದ ಜೂನ್ 7 ರ ವರೆಗೆ ಶಿವಮೊಗ್ಗ ಜಿಲ್ಲಾದ್ಯಂತ ಕಠಿಣ ಲಾಕ್ಡೌನ್ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮೇ 31 ರಿಂದ ಜೂನ್ 7 ರ ವರೆಗೆ ಶಿವಮೊಗ್ಗ ಜಿಲ್ಲಾದ್ಯಂತ ಕಠಿಣ ಲಾಕ್ಡೌನ್ ಜಾರಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಮೇ 31 ರಿಂದ ಜೂನ್ 7 ರವರೆಗೆ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದ್ದರೂ, ನಿರೀಕ್ಷಿತ ವೇಗದಲ್ಲಿ ಕಡಿಮೆಯಾಗುತ್ತಿಲ್ಲ. ಲಾಕ್‍ಡೌನ್ ಜಾರಿಯಲ್ಲಿದ್ದರೂ, ಜನರು ಅನಗತ್ಯವಾಗಿ ಓಡಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೋಮವಾರ 10 ಗಂಟೆಯಿಂದ ಒಂದು ವಾರ ಕಾಲ ಕಟ್ಟುನಿಟ್ಟಿನಿಂದ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಈ ಅವಧಿಯಲ್ಲಿ ಔಷಧಿ ಅಂಗಡಿಗಳು, ನೆರೆಹೊರೆಯಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಂತಹ ಅಗತ್ಯ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ತರಕಾರಿ, ದಿನಸಿ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ 8 ರವರೆಗೆ ತೆರೆಯಲು ಅವಕಾಶವಿದೆ. ಸಗಟು ದಿನಸಿ ಮಳಿಗೆಗಳು, ಎಪಿಎಂಸಿ, ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆಲ್ಲಾ ಕಚೇರಿಗಳು, ಬ್ಯಾಂಕ್ ಸೇವೆ ಸಹ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.

ಹೊಟೇಲ್‍ನಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಮದುವೆಗೆ ಅವಕಾಶವಿದೆ. ಆದರೆ ಮದುವೆಗೆ ಸಂಬಂಧಿಸಿದ ಸಮಾರಂಭಗಳು, ಗೃಹಪ್ರವೇಶ ಇತ್ಯಾದಿಗಳಿಗೆ ಅನುಮತಿ ಇರುವುದಿಲ್ಲ. ಈಗಾಗಲೇ ಅನುಮತಿ ನೀಡಲಾಗಿರುವ ಅಗತ್ಯ ಕೈಗಾರಿಕಾ ಚಟುವಟಿಕೆಗಳಿಗೆ, ಕೃಷಿ ಚಟುವಟಿಕೆಗಳಿಗೆ ಅವಕಾಶವಿರುವುದು. ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ . ಲಾಕ್‍ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗೆ ಬರುವ ವಾಹನಗಳನ್ನು ಜಪ್ತಿ ಮಾಡುವುದು ಮಾತ್ರವಲ್ಲದೆ, ಸವಾರರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಕಳೆದ 7 ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ಒಂದು ವಾರ ಕಾಲ ಕಠಿಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 26 ಸಕ್ರಿಯ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನೀರನ್ನು ಸರಿಯಾಗಿ ಕುದಿಸಿ ಆರಿಸಿ ಕುಡಿಯುವುದು ಸೇರಿದಂತೆ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಜನರು ಅನುಸರಿಸಬೇಕು ಎಂದು ಸಚಿವರು ತಿಳಿಸಿದರು.

 

ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...