ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಪ್ರಧಾನ ಮಂತ್ರಿ ನರೇಂದ್ರ ಮೋದಿರ ಆಡಳಿತ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮರಾಠಿ ದೈನಿಕ ’ಲೋಕಸತ್ತಾ’ ಪುಣೆಯಲ್ಲಿ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಪವಾರ್, “ಮೋದಿಯವರ ಮನೋಧರ್ಮ ಹೇಗಿದೆಯೆಂದರೆ, ಅವರು ಒಮ್ಮೆ ಯಾವುದಾದರೂ ಕೆಲಸ ಕೈಗೆತ್ತಿಕೊಂಡರೆ, ಅದು ಮುಗಿಯುವ ಹಂತ ತಲುಪುತ್ತದೆ ಎಂದು ಖಾತ್ರಿಪಡಿಸುತ್ತಾರೆ. ಆಡಳಿತದ ಮೇಲೆ ಅವರಿಗೆ ಉತ್ತಮ ಹಿಡಿತವಿದ್ದು, ಅದುವೇ ಅವರ ಶಕ್ತಿಯಾಗಿದೆ,” ಎಂದಿದ್ದಾರೆ.
ತಮ್ಮ ಸರ್ಕಾರದ ನೀತಿಗಳ ಸಮರ್ಪಕ ಅನುಷ್ಠಾನಕ್ಕಾಗಿ ಆಡಳಿತ ಹಾಗೂ ಸಂಪುಟದಲ್ಲಿನ ತಮ್ಮ ಸಹೋದ್ಯೋಗಿಗಳು ಹೇಗೆ ಒಮ್ಮತದಲ್ಲಿ ಕೆಲಸ ಮಾಡಬಹುದು ಎಂಬುದರ ಮೇಲೆ ಪ್ರಧಾನಿ ಸಾಕಷ್ಟು ಗಮನ ನೀಡುತ್ತಾರೆ ಎಂದ ಪವಾರ್, ತಮ್ಮ ಸಹೋದ್ಯೋಗಿಗಳನ್ನು ಮುನ್ನಡೆಸಿಕೊಂಡು ಹೋಗುವ ಮೋದಿಯವರ ವೈಖರಿ ಹಿಂದಿನ ಪ್ರಧಾನಿ ಡಾ. ಮನಮೋಹನ್‌ಸಿಂಗ್‌ರಂಥವರಲ್ಲಿ ಕಾಣುತ್ತಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವರು ತಿಳಿಸಿದ್ದಾರೆ.
ಕೊರೊನಾ ಅಲರ್ಟ್: ಹಲವು ರಾಜ್ಯಗಳಲ್ಲಿ ದಿನದ ಪ್ರಕರಣಗಳಲ್ಲಿ ಭಾರಿ ಏರಿಕೆ
ಇದೇ ವೇಳೆ, ಆಡಳಿತವು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಜನತೆಯ ಆಶೋತ್ತರಗಳೊಂದಿಗೆ ಹೊಂದುತ್ತಿವೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪವಾರ್, “ಈ ನಿಟ್ಟಿನಲ್ಲಿ, ನನಗೆ ಲೋಪಗಳು ಕಾಣುತ್ತಿವೆ,” ಎಂದುತ್ತರಿಸಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರದ ಶಿವಸೇನಾ-ಕಾಂಗ್ರೆಸ್ ಸರ್ಕಾರದ ಕೆಲವೊಂದು ಸಚಿವರ ಮೇಲೆ ಕೇಂದ್ರ ಸರ್ಕಾರದ ಸಂಸ್ಥೆಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇಳಿದಾಗ, ತಾವು ಈ ಬಗ್ಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ ಎಂದಿದ್ದಾರೆ