ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ನೇತೃತ್ವದ ಗುಂಪೊಂದು ರಾಮಮಂದಿರ ದೇವಾಲಯ ನಿರ್ಮಾಣ ಹಾಗೂ ವಿಗ್ರಹಗಳ ರಕ್ಷಣೆಗೆ ಮಾಡಲಾದ ಖರ್ಚಿನ ಬಗ್ಗೆ ವಿವರಣೆ ಬೇಕೆಂದು ಕೋರಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.
ರಾಮಜನ್ಮ ಭೂಮಿ ಪ್ರದೇಶದ ಒಳಗಿರುವ ಐತಿಹಾಸಿಕ ದೇವಾಲಯವನ್ನ ನೆಲಸಮ ಮಾಡಲಾಗುತ್ತಿದೆ. ಅವುಗಳನ್ನ ಪುನರ್ ಸ್ಥಾಪಿಸಿ ನವೀಕರಣ ಮಾಡಬೇಕಿತ್ತು. ಈ ದೇವಾಲಯಕ್ಕೆ ಸೇರಿದ ವಿಗ್ರಹಗಳು ನಾಪತ್ತೆಯಾಗಿವೆ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ರಾಮ ಮಂದಿರ ಜನ್ಮಭೂಮಿ ಪ್ರದೇಶ ಖರೀದಿ ವೇಳೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಮ ಮಂದಿರ ಟ್ರಸ್ಟ್ ವಿರುದ್ಧ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷಗಳು ಆರೋಪ ಮಾಡಿದ ಬೆನ್ನಲ್ಲೇ ಇದೀಗ ಈ ಆರೋಪವೊಂದು ಬೆಳಕಿಗೆ ಬಂದಿದೆ. ಆದರೆ ರಾಮ ಮಂದಿರ ಟ್ರಸ್ಟ್ನ ಸದಸ್ಯರು ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿದ ರಾಮ ಮಂದಿರ ಟ್ರಸ್ಟ್ ಅಧ್ಯಕ್ಷರ ಪರ ವಕ್ತಾರ ಮಹಂತ್ ಕಮಲ್ ನಯನ್ ದಾಸ್, ಈಗ ನಮ್ಮ ಮೇಲೆ ಬೆದರಿಕೆ ಒಡ್ಡುತ್ತಿರುವವರ್ಯಾರೂ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಕೊಡುಗೆಯನ್ನ ನೀಡಿದವರಲ್ಲ. ನಾವು ದಶಕಗಳಿಂದ ಕಾನೂನಾತ್ಮಕ ಹೋರಾಟವನ್ನ ನಡೆಸಿಕೊಂಡು ಬರ್ತಿದ್ದೇವೆ. ಆದರೆ ಕೋರ್ಟ್ ಕೇಸ್ ಹಾಕಿದ ಮಾತ್ರಕ್ಕೆ ನಾವು ಹೆದರೋದಿಲ್ಲ ಎಂದು ಹೇಳಿದ್ದಾರೆ.