ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಕ್ಟೋಬರ್ 21 ರಿಂದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಆರಂಭವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ಬಿಸಿಯೂಟಕ್ಕಾಗಿ ದಾಸ್ತಾನು ಇರುವ ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸಬೇಕು. ಸರ್ಕಾರದ ಬಿಸಿಯೂಟ ಅನುದಾನ ಬಿಡುಗಡೆಯಾಗುವವರೆಗೆ ಶಾಲೆಯ ಅಡುಗೆಯ ಅನುದಾನ ಸಂಚಿತ ನಿಧಿಯಿಂದ ಹಣ ಭರಿಸಬೇಕು. ಸಮೀಪದ ಅಂಗಡಿಗಳಿಂದ ಅಗತ್ಯ ಆಹಾರಧಾನ್ಯ ಖರೀದಿಸಬೇಕು. ಸ್ಟವ್ ರಿಪೇರಿ, ಖರೀದಿ, ಸಿಲಿಂಡರ್ ಹಾಗೂ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯ ಖರೀದಿಗೆ ಎಸ್.ಡಿ.ಎಂ.ಸಿ. ಅನುಮೋದನೆಯೊಂದಿಗೆ ಸಂಚಿತ ನಿಧಿಯಿಂದ 5 ರಿಂದ 8 ಸಾವಿರ ರೂ. ಪಡೆಯಬಹುದು. ಮಕ್ಕಳು, ಶಿಕ್ಷಕರು, ಅಡುಗೆ ಸಿಬ್ಬಂದಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಲಾಗಿದೆ.