ಬೆಂಗಳೂರು : ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ಹೌದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಂವಿಧಾನಬದ್ದವಾಗಿ ರಾಜ್ಯಗಳಿಗೆ ಅಧಿಕಾರ ಕೊಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನಿವೃತ್ತ ನ್ಯಾಯ ಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಮಾದಿಗ ಸಮುದಾಯದ ಸಚಿವರು, ಮುಖಂಡರು ಪಟ್ಟು ಹಿಡಿದಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಪಕ್ಷದ ನಾಯಕರು ಭರವಸೆ ನೀಡಿದ್ದರು.