ಲಾಕರ್‌ಗಳ ನಿರ್ವಹಣೆಯ ವಿಚಾರದಲ್ಲಿ ಗ್ರಾಹಕರು ಕೇಳಿದಾಗ ಕೈತೊಳೆದುಕೊಳ್ಳುವ ತಮ್ಮ ಹಳೇ ಚಾಳಿಯನ್ನು ಬ್ಯಾಂಕುಗಳು ಮುಂದುವರೆಸುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಆರು ತಿಂಗಳ ಒಳಗೆ ಈ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು ತರಲು ಆರ್‌ಬಿಐಗೆ ಸೂಚಿಸಿದೆ.
ಜಾಗತೀಕರಣದ ಹಿನ್ನೆಲೆಯಲ್ಲಿ, ದೇಶೀ ಹಾಗೂ ಜಾಗತಿಕ ಆರ್ಥಿಕ ವ್ಯವಹಾರಗಳು ಹಲವು ಪಟ್ಟು ವೃದ್ಧಿಯಾಗಿರುವ ಕಾರಣ ಸಾಮಾನ್ಯ ಜನರ ಜೀವನಗಳಲ್ಲಿ ಬ್ಯಾಂಕುಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಶಾಂತನಗೌಡರ್ ಹಾಗೂ ವಿನೀತ್ ಸರಣ್ ನೇತೃತ್ವದ ಪೀಠವು ತಿಳಿಸಿದೆ.
ನಗದುರಹಿತ ಆರ್ಥಿಕತೆಯತ್ತ ಸ್ಥಿರವಾಗಿ ವಾಲುತ್ತಿರುವ ಕಾರಣದಿಂದ ಜನರು ದ್ರವರೂಪದ ಆಸ್ತಿಯನ್ನು ತಂತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಯಾವುದೇ ಬ್ಯಾಂಕಿಂಗ್ ಸಂಸ್ಥೆಯು ಕೊಡಮಾಡುವ ಅಗತ್ಯ ಸೇವೆಗಳಲ್ಲಿ ಲಾಕರ್ ಸೌಲಭ್ಯವೂ ಸೇರಿದೆ ಎಂದ ಪೀಠ, ಇಂಥ ಸಂದರ್ಭದಲ್ಲಿ ಲಾಕರ್‌ಗಳ ನಿರ್ವಹಣೆ ಹಾಗೂ ಕಾರ್ಯದಲ್ಲಿ ಬ್ಯಾಂಕುಗಳು ಗ್ರಾಹಕರೆಡೆಗಿನ ತಮ್ಮ ಹೊಣೆಯ ವಿಚಾರದಲ್ಲಿ ಕೈ ತೊಳೆದುಕೊಳ್ಳುವಂತಿಲ್ಲ ಎಂದಿದೆ.
ಈ ಸಂಬಂಧ ಸೂಕ್ತವಾದ ನೀತಿ-ನಿಯಮಗಳನ್ನು ತರಲು ಆರ್‌ಬಿಐಗೆ ನಾವು ನಿರ್ದೇಶನ ಕೊಡುತ್ತೇವೆ ಎಂದು ಪೀಠವು ಆದೇಶಿಸಿದೆ.