ಬೆಂಗಳೂರು: ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿಟ್ಟಿದ್ದ ಸಂದರ್ಭದಲ್ಲಿ ಅಂಡಮಾನ್ ಜೈಲಿನ ಕೋಣೆಗೆ ಬುಲ್ ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ರೆಕ್ಕೆಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು ಎಂದು ಎಂಟನೇ ತರಗತಿಯ ಪಠ್ಯದಲ್ಲಿ ಸಾವರ್ಕರ್ ಕುರಿತಾದ ಪಾಠದಲ್ಲಿದೆ. ದೇಶಭಕ್ತಿ ವರ್ಣಿಸುವ ಬರದಲ್ಲಿ ಉತ್ಪ್ರೇಕ್ಷೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಬ್ರಿಟಿಷರಿಂದ ಕಠೋರ ಶಿಕ್ಷೆಗೆ ಗುರಿಯಾದ ಸಾವರ್ಕರ್ ಅವರನ್ನು ಎರಡು ಜೀವಾವಧಿ ಶಿಕ್ಷೆಗಳಿಗೆ ಗುರಿಪಡಿಸಿ ಅಂಡಮಾನ್ ಜೈಲಿನಲ್ಲಿ ಇಡಲಾಗಿತ್ತು. ಬುಲ್ ಬುಲ್ ಹಕ್ಕಿಗಳು ಸಾವರ್ಕರ್ ಕೋಣೆಯೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು ಎನ್ನುವ ಸಾಲುಗಳು ಪಠ್ಯದಲ್ಲಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕೆ.ಟಿ. ಗಟ್ಟಿ ಅವರು ಸಾವರ್ಕರ್ ಅವರನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ್ದ ಪ್ರವಾಸ ಕಥನ ಆಧರಿಸಿ ‘ಕಾಲವನ್ನು ಗೆದ್ದವರು’ ಪಾಠವನ್ನು ಎಂಟನೇ ತರಗತಿಯ ಪಠ್ಯದಲ್ಲಿ ಸೇರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಉತ್ಪ್ರೇಕ್ಷೆಯ ಸಾಲುಗಳ ಬಗ್ಗೆ ಚರ್ಚೆಯಾಗುತ್ತಿದೆ.
ಲೇಖಕರ ಸಾಲುಗಳನ್ನಷ್ಟೇ ಸೇರಿಸಲಾಗಿದೆ. ಹೊಸದಾಗಿ ಯಾವುದನ್ನು ಸೇರಿಸಿಲ್ಲ ಎಂದು ಶಿಕ್ಷಣ ಇಲಾಖೆ ಪಠ್ಯಪುಸ್ತಕ ಸೊಸೈಟಿ ಅಧಿಕಾರಿಗಳು ಹೇಳಿದ್ದಾರೆ.