ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಸೋಮವಾರ ತಿಹಾರ್ ಜೈಲು ಅಧೀಕ್ಷಕ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ.
“ಕೇಂದ್ರ ಕಾರಾಗೃಹ ನಂ.7 ರ ಅಧೀಕ್ಷಕರನ್ನು ಈ ಮೂಲಕ ಅಮಾನತುಗೊಳಿಸಲಾಗಿದೆ, ಕೇಂದ್ರ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1965 ರ ನಿಯಮ 10 ರ ಉಪ-ನಿಯಮ 1 ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಜೈಲಲ್ಲಿರುವ ಸಚಿವರಿಗೆ ವಿಶೇಷ ಸೌಲಭ್ಯ ನೀಡಿದ ಆರೋಪದ ನಡುವೆ ಒಂದು ವಾರದಲ್ಲಿ ಕ್ರಮ ಎದುರಿಸುತ್ತಿರುವ ಎರಡನೇ ಹಿರಿಯ ಜೈಲು ಅಧಿಕಾರಿ ಅಜಿತ್ ಕುಮಾರ್. ಕಳೆದ ವಾರ ಕಾರಾಗೃಹದ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಅವರ ಜಾಗಕ್ಕೆ ಮತ್ತೊಬ್ಬ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಸಂಜಯ್ ಬೇನಿವಾಲ್ ಅವರನ್ನು ನೇಮಿಸಲಾಗಿತ್ತು.
ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷದ ಮೇ ತಿಂಗಳಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಿತು. ಸಿಬಿಐ ಸತ್ಯೇಂದ್ರ ಜೈನ್ ವಿರುದ್ಧ 2017 ರಲ್ಲಿ ದಾಖಲಿಸಿದ ಪ್ರಕರಣವನ್ನು ಆಧರಿಸಿ ಇಡಿ ತನಿಖೆ ನಡೆಯುತ್ತಿದೆ. ಎಎಪಿ ನಾಯಕ ಸತ್ಯೇಂದ್ರ ಜೈನ್ ಮತ್ತು ಅವರ ಪತ್ನಿ ಪೂನಂ ಜೈನ್ ಫೆಬ್ರವರಿ 2015 ಮತ್ತು ಮೇ 2017 ರ ನಡುವೆ 1.47 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.